ಬೆಂಗಳೂರು | ಬಿಜೆಪಿ ಏಜೆಂಟ್ ಸಮ್ಮುಖದಲ್ಲಿ ಅಂಚೆ ಮತದಾನ : ಕ್ರಮ ಜರುಗಿಸುವಂತೆ ವಿಡಿಯೋ ಸಹಿತ ಮುಖ್ಯ ಚುನಾವಣಾಧಿಕಾರಿಗೆ ದೂರು
ಬೆಂಗಳೂರು : ಮತದಾರರ ಪಟ್ಟಿಯಲ್ಲಿರುವ 85 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ವಿಶೇಷ ಚೇತನರು ಅಂಚೆ ಮತದಾನ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳ ತಂಡವು ಮನೆಮನೆಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸುತ್ತಿದ್ದ ವೇಳೆ ಅವರ ಜೊತೆಗೆ ಬಿಜೆಪಿ ಏಜೆಂಟ್ ಇರುವುದು ಕಂಡುಬಂದಿದೆ. ಆ ಮೂಲಕ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.
ಶನಿವಾರ ಈ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್‍ರ ಚುನಾವಣಾ ಏಜೆಂಟ್ ಪ್ರವೀಣ್ ಪೀಟರ್ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದು, ಬಿಜೆಪಿ ಏಜೆಂಟ್ ಚುನಾವಣಾಧಿಕಾರಿಗಳ ತಂಡದೊಂದಿಗೆ ಇರುವುದು ತಿಳಿದು ಬಂದಿದೆ. ಅಲ್ಲದೆ, ಬಿಜೆಪಿ ಏಜೆಂಟ್ ಇರುವ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸುಮಾರು ಒಂದೂವರೆ ನಿಮಿಷದ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಚುನಾವಣಾಧಿಕಾರಿಗಳ ಜೊತೆಗಿದ್ದ ಬಿಜೆಪಿ ಏಜೆಂಟ್‍ನನ್ನು ಕಿರಣ್ ಎಂದು ಗುರುತಿಸಲಾಗಿದೆ. ಬಿಜೆಪಿ ಏಜೆಂಟ್ ಉಪಸ್ಥಿತರಿದ್ದ ವೇಳೆ ನಡೆದ ಮತದಾನ ಪ್ರಕ್ರಿಯೆಯನ್ನು ಅಸಿಂಧುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿರಿಯ ನಾಗರಿಕರು, ವಿಕಲ ಚೇತನರು ಮನೆಯಿಂದಲೇ ಮತದಾನ ಮಾಡುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಏಜೆಂಟ್ ಚುನಾವಣಾಧಿಕಾರಿಗಳ ಜತೆಗೂಡಿ ಮತದಾನ ಮಾಡುವ ನಾಲೈದು ಮನೆಗಳಿಗೆ ತೆರಳಿದ್ದು, ನಿಮ್ಮ ಚುನಾವಣಾಧಿಕಾರಿಗಳು ಮತ್ತು ಮೈಕ್ರೋ ಅಬ್ ಸರ್ವರ್ ಮೂಕಪ್ರೇಕ್ಷಕರಾಗಿ ವರ್ತಿಸಿರುವುದು ಕಂಡು ಬಂದಿದೆ.
ಆದುದರಿಂದ ಈ ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಆ ಮತವನ್ನು ಅಸಿಂಧುಗೊಳಿಸಬೇಕು. ಈ ಸಂಬಂಧ ತಕ್ಷಣವೇ ಕ್ರಮ ಕೈಗೊಂಡು, ನೀತಿ ಸಂಹಿತೆ ಉಲ್ಲಂಘಿಸಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರವೀಣ್ ಪೀಟರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎ.13ರಿಂದ 18ರ ವರೆಗೆ ಮತದಾರರ ಪಟ್ಟಿಯಲ್ಲಿರುವ 85 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ವಿಶೇಷ ಚೇತನರು ಮನೆಯಿಂದಲೇ ಗೌಪ್ಯ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 95,128 85 ವರ್ಷ ಮೇಲ್ಪಟ್ಟ ಹಾಗೂ 22,222 ವಿಶೇಷ ಚೇತನರನ್ನು ಗುರುತಿಸಲಾಗಿದೆ. ಈ ಪೈಕಿ 85 ವರ್ಷ ಮೇಲ್ಪಟ್ಟ 6206 ಮತದಾರರು ಹಾಗೂ ವಿಶೇಷ ಚೇತನರು 201 ಮತದಾರರು ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.