ಬೆಂಗಳೂರು | ಕಾರುಗಳನ್ನು ಬಾಡಿಗೆಗೆ ಪಡೆದು ಮಾರಾಟ : ಆರೋಪಿ ಬಂಧನ

Update: 2024-06-22 13:52 GMT

ಬೆಂಗಳೂರು : ಕಾರುಗಳನ್ನು ಬಾಡಿಗೆಗೆ ಪಡೆದು ಬಳಿಕ ಜಿಪಿಎಸ್ ಕಿತ್ತೆಸೆದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಅಥವಾ ಗಿರವಿ ಇಡುತ್ತಿದ್ದ ಪ್ರಕರಣದಡಿ ಆರೋಪಿಯೊಬ್ಬನನ್ನು ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಲಗ್ಗೆರೆ ನಿವಾಸಿ ಶ್ರೀನಿವಾಸ್(35) ಎಂಬಾತನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆತನಿಂದ ವಿವಿಧ ಕಂಪೆನಿಗಳ 9 ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಕಾಳೇನ ಅಗ್ರಹಾರದ ಎಂಎಲ್‍ಎ ಲೇಔಟ್ ನಿವಾಸಿ ಮಹೇಶ್ ಎಂಬುವವರ ಕಾರನ್ನು ಒಂದು ತಿಂಗಳ ಮಟ್ಟಿಗೆ ಬಾಡಿಗೆಗೆ ಪಡೆದು ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಶಿವಮೊಗ್ಗದಲ್ಲಿ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಶ್ರೀನಿವಾಸ್, ಫೇಸ್‍ಬುಕ್, ಒಎಲ್‍ಎಕ್ಸ್ ಸೇರಿದಂತೆ ಇತರೆ ಜಾಲತಾಣಗಳಲ್ಲಿ ಕಾರು ಬಾಡಿಗೆಗೆ ಇರುವ ಅಥವಾ ಮಾರಾಟಕ್ಕೆ ಇರುವ ಜಾಹೀರಾತು ಹಾಕುವ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದ. ಕಾರಿನ ಸಾಲದ ಕಂತು ಪಾವತಿಸಲು ಪರದಾಡುವ ವ್ಯಕ್ತಿಗಳನ್ನು ಗುರುತಿಸಿ, ನಾನೇ ಬಾಡಿಗೆಗೆ ಕಾರನ್ನು ಓಡಿಸಿಕೊಂಡು ಕಾರಿನ ಸಾಲದ ಕಂತನ್ನು ಪಾವತಿ ಮಾಡುತ್ತೇನೆ. ನಿಮಗೂ ತಿಂಗಳಿಗೆ ಇಂತಿಷ್ಟು ಹಣ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ ಎನ್ನಲಾಗಿದೆ.

ಬಳಿಕ ಆ ಕಾರುಗಳ ಮಾಲಕರಿಂದ ಅಸಲಿ ಆರ್ ಸಿ, ವಿಮಾ ಪಾಲಿಸಿ ಸೇರಿದಂತೆ ಇತರೆ ದಾಖಲೆಗಳನ್ನು ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಂಡು ಬಳಿಕ ಆ ದಾಖಲೆಗಳನ್ನು ಎಡಿಟ್ ಮಾಡಿ ತನ್ನ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ನಂತರ ಕಾರಿನ ಜಿಪಿಎಸ್ ಕಿತ್ತೆಸೆದು ಪರಿಚಿತ ವ್ಯಕ್ತಿಗಳ ಮುಖಾಂತರ ಕಾರನ್ನು ಅಡಮಾನವಿರಿಸಿ 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಸಾಲ ಪಡೆಯುತ್ತಿದ್ದ. ಬಳಿಕ ಕಾರಿನ ಸಾಲದ ಕಂತನ್ನು ಪಾವತಿಸುತ್ತಿರಲಿಲ್ಲ.

ಇನ್ನು ಬ್ಯಾಂಕಿನಿಂದ ಕಾರಿನ ಸಾಲದ ಕಂತು ಪಾವತಿಸುವಂತೆ ಕಾರಿನ ಮಾಲಕರಿಗೆ ನೋಟಿಸ್ ಬರುತ್ತಿತ್ತು. ಆಗ ಮಾಲಕರು ಶ್ರೀನಿವಾಸ್‍ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಶ್ರೀನಿವಾಸ್ ತನ್ನ ಮೊಬೈಲ್ ಸಂಖ್ಯೆ ಬದಲಿಸಿಕೊಂಡು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಸದ್ಯ ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News