ಬೆಂಗಳೂರು | ಮಾದಕ ವಸ್ತುಗಳ ಮಾರಾಟ : 18.80 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ, ನಾಲ್ವರ ಬಂಧನ

Update: 2024-07-02 14:05 GMT

ಸಾಂದರ್ಭಿಕ ಚಿತ್ರ (PC : Meta AI)

ಬೆಂಗಳೂರು : ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಪ್ರಕರಣದಡಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳ, ವಿದ್ಯಾರಣ್ಯಪುರ ಠಾಣೆ, ಕೋಣನಕುಂಟೆ ಠಾಣೆ ಹಾಗೂ ವಿ.ವಿ.ಪುರಂ ಠಾಣಾ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 18.80 ಲಕ್ಷ ರೂ. ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆಫ್ರಿಕಾದ ಘಾನಾ ಮೂಲದ ಸಿರಿಲ್(23) ಹಾಗೂ ನೈಜೀರಿಯಾ ಮೂಲದ ಇಮ್ಯಾನ್ಯುಯೆಲ್(27) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿತರಿಂದ ಒಟ್ಟು 12 ಲಕ್ಷ ರೂ. ಮೌಲ್ಯದ ಎಂ.ಡಿ.ಎಂ.ಎ ಕ್ರಿಸ್ಟೆಲ್, ಎಕ್ಸ್‍ಟಿಸಿ ಪಿಲ್ಸ್, ಕೊಕೇನ್, ಒಂದು ದ್ವಿಚಕ್ರ ವಾಹನ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯೋಗ ಹಾಗೂ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿಗಳು ಗೋವಾ, ಮುಂಬೈ ಮತ್ತು ಹೊಸದಿಲ್ಲಿಯಲ್ಲಿ ವಾಸವಾಗಿರುವ ಅವರದ್ದೇ ದೇಶದ ಪ್ರಜೆಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣನಗರದ ದೊಡ್ಡಕಲ್ಲಸಂದ್ರದ ಕೆರೆ ಹಿಂಭಾಗದ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿಕಾಸ್(23) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಒಟ್ಟು 1.80 ಲಕ್ಷ ರೂ. ಮೌಲ್ಯದ 2 ಕೆ.ಜಿ. 20 ಗ್ರಾಂ ಗಾಂಜಾ ಹಾಗೂ 10 ಕೆ.ಜಿ. 600 ಗ್ರಾಂ ತೂಕದ ಪಾಪಿ ಸ್ಟ್ರಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿ.ವಿ.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ವತಿಪುರಂನಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಪಶ್ಚಿಮ ಬಂಗಾಳ ಮೂಲದ ರಸೀಕ್ ಕುಮಾರ್ (22) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಒಟ್ಟು 5 ಲಕ್ಷ ರೂ. ಮೌಲ್ಯದ 3 ಕೆ.ಜಿ. 900 ಗ್ರಾಂ ಗಾಂಜಾ ಮತ್ತು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News