ಬೆಂಗಳೂರು | ಡಿಟೆಕ್ಟಿವ್ ಏಜೆನ್ಸಿಗಳ ಹೆಸರಿನಲ್ಲಿ ಅನಧಿಕೃತವಾಗಿ ಸಿಡಿಆರ್ ಕಲೆಹಾಕುತ್ತಿದ್ದ ಪ್ರಕರಣ : ಏಳು ಮಂದಿ ಬಂಧನ

Update: 2024-05-28 15:50 GMT

ಬೆಂಗಳೂರು : ಡಿಟೆಕ್ಟಿವ್ ಏಜೆನ್ಸಿಗಳ ಹೆಸರಿನಲ್ಲಿ ಅನಧಿಕೃತವಾಗಿ ಸಿಡಿಆರ್ (ಕರೆ ವಿವರಗಳ ದಾಖಲೆ) ಕಲೆಹಾಕುತ್ತಿದ್ದ ಪ್ರಕರಣದಡಿ ಏಳು ಜನ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ವಿಜಯನಗರ ಹಾಗೂ ಗೋವಿಂದರಾಜನಗರ ಠಾಣೆಗಳ ವ್ಯಾಪ್ತಿಯಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಹಾಗೂ ವಿಜಯನಗರ ಉಪವಿಭಾಗದ ಪೊಲೀಸರು, ಮಹಾನಗರಿ ಡಿಟೆಕ್ಟಿವ್ ಆ್ಯಂಡ್ ಸೆಕ್ಯುರಿಟಿ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಹೆಸರಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಿ, ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಪ್ರಕರಣಗಳ ತನಿಖೆ ಕೈಗೊಳ್ಳುವ ತನಿಖಾ ಏಜೆನ್ಸಿಗಳು ಕಾನೂನಾತ್ಮಕವಾಗಿ ಸಿಡಿಆರ್ ಕಲೆಹಾಕುವ ಅಧಿಕಾರ ಹೊಂದಿರುತ್ತವೆ. ಅನಧಿಕೃತವಾಗಿ ಸಿಡಿಆರ್ ಕಲೆ ಹಾಕುವುದು ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆ ತಂದ ಆರೋಪವಾಗುತ್ತದೆ. ಆದರೆ, ಡಿಟೆಕ್ಟಿವ್ ಏಜೆನ್ಸಿ ಸ್ಥಾಪಿಸುವುದಾಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆದಿದ್ದ ಆರೋಪಿಗಳು ಸರಕಾರದ ಪರವಾನಗಿ ಪಡೆಯದೆ ಸರ್ವಿಸ್ ಪ್ರೊವೈಡರ್ ಕಂಪೆನಿಗಳ ಏಜೆಂಟರುಗಳೊಂದಿಗೆ ಶಾಮೀಲಾಗಿ ಬೇರೆ ಬೇರೆ ವ್ಯಕ್ತಿಗಳ ಮೊಬೈಲ್ ನಂಬರ್ ಗಳ ಸಿಡಿಆರ್ ಕಲೆಹಾಕುತ್ತಿದ್ದರು. ಅವುಗಳನ್ನು ಅಪರಾಧ ಕೃತ್ಯಗಳನ್ನು ಎಸಗುವವರಿಗೆ, ಮತ್ತಿತರರಿಗೆ ನೀಡಿ ಹಣ ಪಡೆದುಕೊಳ್ಳುತ್ತಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಆರೋಪಿಗಳು ಒಟ್ಟು 43 ಮೊಬೈಲ್ ನಂಬರ್ ಗಳ ಸಿಡಿಆರ್ ಪಡೆದುಕೊಂಡಿರುವುದು ಸದ್ಯ ಬೆಳಕಿಗೆ ಬಂದಿದೆ. ವಿಜಯನಗರ, ಗೋವಿಂದರಾಜ ನಗರದಲ್ಲಿ ಒಟ್ಟು ಮೂರು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇದುವರೆಗೂ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸಿಸಿಬಿ ಪೊಲೀಸರಿಗೆ ಪ್ರಕರಣದ ತನಿಖೆಯನ್ನು ವರ್ಗಾಯಿಸಲಾಗಿದ್ದು, ಆರೋಪಿಗಳು ಯಾವ ಉದ್ದೇಶಕ್ಕಾಗಿ ಸಿಡಿಆರ್ ಪಡೆದಿದ್ದಾರೆ?, ಹೇಗೆ ಪಡೆದಿದ್ದಾರೆ? ಸುಳ್ಳು ವರದಿಗಳನ್ನು ನೀಡಿ ಹಣ ಸಂಪಾದಿಸುತ್ತಿದ್ದರಾ? ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News