ಬೆಂಗಳೂರು| ಏಳು ಡ್ರಗ್ ಪೆಡ್ಲರ್ ಗಳ ಬಂಧನ: 1.66 ಕೋಟಿ ರೂ. ಮೌಲ್ಯದ ಮಾಲು ಜಪ್ತಿ

Update: 2024-01-12 14:32 GMT

ಬೆಂಗಳೂರು: ಏಳು ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿರುವ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು, ಬಂಧಿತ ಆರೋಪಿಗಳಿಂದ ಒಟ್ಟು 1.66 ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಸಿಸಿಬಿ ಪೊಲೀಸರು ಒಂದು ವಾರದಿಂದ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಗಿರಿನಗರ, ಮಡಿವಾಳ, ಚಿಕ್ಕಜಾಲ, ಆರ್.ಟಿ.ನಗರ ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಬಂಧಿತರ ವಿರುದ್ಧ ಒಟ್ಟು ಐದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರಿಂದ 18.5 ಕೆಜಿ ಗಾಂಜಾ, 203 ಗ್ರಾಂ ಎಂಡಿಎಂಎ, 410 ಎಕ್ಸ್ ಟಸಿ ಪಿಲ್ಸ್, 7 ಮೊಬೈಲ್, 2 ದ್ವಿಚಕ್ರ ವಾಹನ, 1 ಕಾರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.

ಡ್ರಗ್‍ಪೆಡ್ಲರ್ ನಿಂದ 12 ಲಕ್ಷ ರೂ. ಜಪ್ತಿ: ‌

ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು, ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಪೀಟರ್ ಎಂಬುವನಿಂದ 12 ಲಕ್ಷ ರೂ. ಹಣ ಜಪ್ತಿ ಮಾಡಿಕೊಂಡಿದ್ದು, ಎನ್‍ಡಿಪಿಎಸ್ ಕಾಯ್ದೆಯ ಕಲಂ 5(ಎ) ಹಾಗೂ 68(ಇ) ಹಾಗೂ 68(ಎಫ್) ರಲ್ಲಿನ ಅಧಿಕಾರ ಚಲಾಯಿಸಿ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ವಿದ್ಯಾರಣ್ಯ ಪೊಲೀಸರು 2023ರಲ್ಲಿ ಈತನನ್ನು ಬಂಧಿಸಿದ್ದರು.

ಪೀಟರ್ ಹೆಂಡತಿಯ ಬ್ಯಾಂಕ್ ಖಾತೆ ಸೇರಿ ಒಟ್ಟು 7 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪೀಟರ್ 2018ರಲ್ಲಿ ವೈದ್ಯಕೀಯ ವೀಸಾದ ಮೂಲಕ ಭಾರತಕ್ಕೆ ಬಂದು ನೆಲೆಸಿದ್ದಾನೆ. ಪೀಟರ್ 2022ರಲ್ಲಿ ಮಣಿಪುರ ಮೂಲದ ಯುವಯಿ ಎಂಬುವರನ್ನು ಮದುವೆಯಾಗಿದ್ದಾನೆ. ಪೀಟರ್ ಹೆಂಡತಿಯ ಹೆಸರಲ್ಲಿ ನಗರದಲ್ಲಿ ಎರಡು ಬ್ಯಾಂಕ್ ಖಾತೆ ಹೊಂದಿದ್ದಾನೆ. ಆರೋಪಿ ಪೀಟರ್ ಯುಪಿಐ ಪೇಮೆಂಟ್ ಮೂಲಕ ವಹಿವಾಟು ಮಾಡುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.

(

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News