ಬೆಂಗಳೂರು | ಶಾಮನೂರು ಶಿವಶಂಕರಪ್ಪ ಹೆಸರಿನಲ್ಲಿ ಸಹಿ, ಲೆಟರ್ ಹೆಡ್ ದುರ್ಬಳಕೆ : ಮಹಿಳೆಯ ವಿರುದ್ಧ ಎಫ್‍ಐಆರ್
ಬೆಂಗಳೂರು : ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಹಿ ಮತ್ತು ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು ಆಪ್ತ ಸಹಾಯಕರ ಹುದ್ದೆ ಪಡೆಯಲು ಯತ್ನಿಸಿರುವ ಪ್ರಕರಣದಡಿ ಮಹಿಳೆಯ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಅವರು ನೀಡಿರುವ ದೂರಿನನ್ವಯ ವಿನುತಾ ಕೆ.ಸಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಮೂಲದ ವಿನುತಾ ಕೆ.ಸಿ ಅವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸುವಂತೆ ಶಾಸಕರು ಮನವಿ ಮಾಡಿರುವಂತೆ ಅವರ ಸಹಿ ಇರುವ ಲೆಟರ್ ಹೆಡ್ ಅನ್ನು ವಿಧಾನಸಭಾ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.
ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ನೀಡಿರುವ ಪತ್ರವೆಂದು ಭಾವಿಸಿದ್ದ ಸಚಿವಾಲಯ ಅದರಂತೆ ಆಪ್ತ ಸಹಾಯಕರನ್ನಾಗಿ ನೇಮಿಸಿ ಆದೇಶಿಸಿತ್ತು. ಬಳಿಕ ತಾವು ಪತ್ರ ನೀಡಿಲ್ಲ, ಅದು ನಕಲಿ ಎಂದು ಶಾಸಕರು ವಿಧಾನಸಭಾ ಸಚಿವಾಲಯದ ಗಮನಕ್ಕೆ ತಂದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣಾ ಪೊಲೀಸರು ಆರೋಪಿ ವಿನುತಾ ಕೆ.ಸಿ ಎಂಬುವರ ವಿರುದ್ಧ ಕಾನೂನು ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.