ಬೆಂಗಳೂರು | ಈಜುಕೊಳದ ಬಳಕೆಗೆ ವಿಧಿಸಿದ್ದ ನಿಷೇಧ ಸಡಿಲಿಸಿದ ಜಲಮಂಡಳಿ

Update: 2024-05-16 14:27 GMT

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈಜುಕೊಳದ ಬಳಕೆಗೆ ಹೇರಲಾಗಿದ್ದ ನಿಷೇಧವನ್ನು ಬೆಂಗಳೂರು ಜಲಮಂಡಳಿ ಸಡಿಲಿಸಿದೆ.

ಬೆಂಗಳೂರು ನಗರದ ಅಪಾರ್ಟ್‍ಮೆಂಟ್ ಹಾಗೂ ಕ್ರೀಡಾ ಸಂಸ್ಥೆಯವರು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್, ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ಈಜುಕೊಳದ ಬಳಕೆಯ ನಿಷೇಧವನ್ನು ಸಡಿಲಿಸಿದ್ದಾರೆ.

ಕಡ್ಡಾಯವಾಗಿ ಈಜುಕೊಳಕ್ಕೆ ಕಾವೇರಿ ನೀರನ್ನು ಬಳಸುವಂತಿಲ್ಲ. ಈಜುಕೊಳಕ್ಕೆ ಮಳೆ ನೀರು ಅಥವಾ ಕೊಳವೆ ಬಾವಿ ಮೂಲಕ ನೀರನ್ನು ಮಾತ್ರ ಬಳಸತಕ್ಕದ್ದು. ಈಜುಕೊಳಕ್ಕೆ ನೀರನ್ನು ಶುದ್ದೀಕರಿಸುವ ಯಂತ್ರವನ್ನು ಅಳವಡಿಸಿಕೊಂಡು ನೀರನ್ನು ಮರುಬಳಕೆ ಮಾಡಬೇಕು ಎಂದಿದ್ದಾರೆ.

ತಮ್ಮ ಸಮುಚ್ಚಯದಲ್ಲಿ ಕಡ್ಡಾಯವಾಗಿ ಕೊಳವೆ ಬಾವಿ ಅಕ್ಕಪಕ್ಕದಲ್ಲಿ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಿರಬೇಕು. ಎಲ್ಲ ಟ್ಯಾಪ್‍ಗಳಿಗೆ ಕಡ್ಡಾಯವಾಗಿ ಏರಿಯೇಟರ್ ಅಳವಡಿಸಿಕೊಂಡಿರಬೇಕು ಹಾಗೂ ಕುಡಿಯುವುದನ್ನು ಹೊರತುಪಡಿಸಿ ಅನ್ಯ ಬಳಕೆಗಳಿಗೆ(ಗಾರ್ಡೆನಿಂಗ್ ಮತ್ತು ಫ್ಲಶಿಂಗ್)ಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಸಬೇಕು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ.

ಈಜುಕೊಳಕ್ಕೆ ಕಾವೇರಿ ನೀರು ಬಳಕೆ ಮಾಡುವುದು ಕಂಡಬಂದಲ್ಲಿ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ಅನ್ವಯ 5 ಸಾವಿರ ರೂ.ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆ ಮರುಕಳಿಸಿದಲ್ಲಿ ದಂಡ ಮೊತ್ತ 5 ಸಾವಿರ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ ಪ್ರತಿದಿನ 500 ರೂ. ದಂಡವನ್ನು ವಿಧಿಸಲಾಗುವುದು ಎಂದು ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News