ಬೆಂಗಳೂರು | ಕುಡಿತಬೇಡವೆಂದ ವ್ಯಕ್ತಿಯನ್ನು ಹತ್ಯೆಗೈದ ಯುವಕರು
ಬೆಂಗಳೂರು : ಕುಡಿತದಿಂದ ದೂರವಿರಲು ಸಲಹೆ ಯುವಕರಿಗೆ ಸಲಹೆ ನೀಡಿದ್ದಕ್ಕಾಗಿ ಆಕ್ರೋಶಗೊಂಡ ಇಬ್ಬರು ಯುವಕರು 45 ವರ್ಷದ ವ್ಯಕ್ತಿಯೊಬ್ಬರನ್ನು ಇರಿದು ಕೊಂದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮಚಂದ್ರಾಪುರ ನಿವಾಸಿ ವೆಂಕಟೇಶ್ ಕೊಲೆಯಾದ ವ್ಯಕ್ತಿ. ವೆಂಕಟೇಶ್ ಮಂಗಳವಾರ ರಾತ್ರಿ 10:30ರ ಸುಮಾರಿಗೆ ರಾಮಚಂದ್ರಾಪುರ ಆಟದ ಮೈದಾನದ ಕಡೆಗೆ ವಾಕಿಂಗ್ ಹೋಗಿದ್ದರು. ಈ ವೇಳೆ ಬಸ್ ನಿಲ್ದಾಣದ ಬಳಿ ಇಬ್ಬರು ಯುವಕರು ಮದ್ಯ ಸೇವಿಸುತ್ತಿರುವುದನ್ನು ನೋಡಿ ಅವರ ಬಳಿ ಹೋಗಿ ನೀವು ಚಿಕ್ಕ ವಯಸ್ಸಿನವರು, ಕುಡಿತದಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ.
ವೆಂಕಟೇಶ್ ಮಾತಿನಿಂದ ಕೋಪಗೊಂಡ ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ವೆಂಕಟೇಶ್ ರಕ್ತ ಸುರಿಯುತ್ತ ಬಿದ್ದಿರುವುದನ್ನು ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿದ್ದ ವೆಂಕಟೇಶ್ ಬುಧವಾರ ಮುಂಜಾನೆ 4ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪವನ್‍ಕುಮಾರ್ (24), ಮತ್ತು ನಂದ ಅಲಿಯಾಸ್ ನಂದಗೋಪಾಲ್ (21) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ ಎಂಧು ತಿಳಿದು ಬಂದಿದೆ.