ಬೆಂಗಳೂರು | ಯೂಟ್ಯೂಬ್ ನೋಡಿ ದ್ವಿಚಕ್ರ ವಾಹನ ಕಳ್ಳತನ : ಆರೋಪಿ ಬಂಧನ

Update: 2024-05-04 16:28 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಸಂಬಳ ಕೊಡದ ಹೊಟೇಲ್ ಮಾಲಕ ಬೈಕ್ ಕಳ್ಳತನ ಮಾಡು ಎಂದು ತಮಾಷೆಯಾಗಿ ಹೇಳಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿಯೊಬ್ಬ ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡಿದ ಪ್ರಕರಣ ಸಂಬಂಧ ಆರೋಪಿಯನ್ನು ಮಡಿವಾಳ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಅಖೀಬ್ ಖಾನ್ (23) ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕೇರಳ ಮೂಲದ ಈತ ಕೆಲ ತಿಂಗಳಿಂದ ಮಡಿವಾಳದ ಹೊಟೇಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೆಚ್ಚುವರಿಯಾಗಿ ದುಡಿಸಿಕೊಂಡು ಸರಿಯಾಗಿ ಸಂಬಳ ನೀಡದ ಆರೋಪ ಮಾಲಕ ಆಸಿಫ್ ಮೇಲಿತ್ತು. ಇತ್ತೀಚೆಗೆ ಸಂಬಳ ಕೊಟ್ಟರೆ ಕೆಲಸ ಬಿಟ್ಟು ಹೋಗುತ್ತೇನೆ. ಊರಿಗೆ ಹೋಗಲು ಹಣವಿಲ್ಲ ಎಂದು ಮಾಲಕನಿಗೆ ಆಖೀಬ್ ಖಾನ್ ತಿಳಿಸಿದ್ದ. ಇದಕ್ಕೆ ಮಾಲಕ ಹೊಟೇಲ್ ಬಳಿ ಎಷ್ಟೊಂದು ದ್ವಿಚಕ್ರ ವಾಹನಗಳಿವೆ ಕಳ್ಳತನ ಮಾಡು ಎಂದು ತಮಾಷೆಯಾಗಿ ಹೇಳಿದ್ದ ಎನ್ನಲಾಗಿದೆ.

ಇದನ್ನೇ ಗಂಭೀರವಾಗಿ ಪರಿಗಣಿಸಿದ ಆರೋಪಿಯು ಯೂಟ್ಯೂಬ್‍ನಲ್ಲಿ ಸರ್ಚ್ ಮಾಡಿ ಬೈಕ್ ಲಾಕ್ ಓಪನ್ ಮಾಡುವುದು ಹೇಗೆ ಎಂದು ತಿಳಿದು ಮಡಿವಾಳದ ಅಯ್ಯಪ್ಪ ದೇವಸ್ಥಾನ ಬಳಿ ನಿಲ್ಲಿಸಿದ್ದ ಆರ್ ಎಕ್ಸ್-100 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದಾನೆ. ಕದ್ದ ದ್ವಿಚಕ್ರ ವಾಹನದಲ್ಲೇ ಕೇರಳಕ್ಕೆ ತೆರಳಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯಾರು ಎಂಬುದನ್ನು ಪತ್ತೆ ಹಚ್ಚಿದ್ದರು.

ಮತ್ತೊಂದಡೆ ದ್ವಿಚಕ್ರ ವಾಹನ ಕದ್ದಿರುವುದು ತಿಳಿದ ಆತನ ಪೋಷಕರು ಬೈದಿದ್ದರಿಂದ ವಿಧಿಯಿಲ್ಲದೇ ಮತ್ತೆ ಬೆಂಗಳೂರಿಗೆ ಬರುವಾಗ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಿದಾಗ ಹೊಟೇಲ್ ಮಾಲಕರು ಸಂಬಳ ನೀಡಿರಲಿಲ್ಲ. ಹೀಗಾಗಿ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದು, ಇನ್ನು ಬೈಕ್ ಕಳ್ಳತನ ಮಾಡು ಎಂದು ಸೂಚಿಸಿದ್ದ ಹೊಟೇಲ್ ಮಾಲಕನಿಗೂ ನೊಟೀಸ್ ಜಾರಿಗೊಳಿಸಿರುವುದಾಗಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News