ಬೆಂಗಳೂರು | ಅನಧಿಕೃತವಾಗಿ ಸಿಲಿಂಡರ್ ರೀಫಿಲ್ಲಿಂಗ್: 8ಲಕ್ಷ ರೂ.ಮೌಲ್ಯದ 110 ಸಿಲಿಂಡರ್ ಗಳ ವಶ

Update: 2024-02-13 14:51 GMT

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಗೃಹಬಳಕೆ ಸಿಲಿಂಡರ್ ಗಳನ್ನು ಅನಧಿಕೃತವಾಗಿ ರೀಫಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿ, ಎಂಟು ಲಕ್ಷ ರೂ. ಮೌಲ್ಯದ 110 ಸಿಲಿಂಡರ್ ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹ ಬಳಕೆ ಸಿಲಿಂಡರ್ ಏಜೆನ್ಸಿ ಹಾಗೂ ಉಗ್ರಾಣದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಗೊತ್ತಾಗಿದೆ.

ದಾಳಿ ಸಮಯದಲ್ಲಿ ರಾಡ್‍ಗಳ ಮೂಲಕ ಬೇರೆ ಸಿಲಿಂಡರ್ ಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವುದು ಕಂಪೆನಿಗಳ ಲೇಬಲ್‍ಗಳನ್ನು ಸಿಲಿಂಡರ್ ಗಳಿಗೆ ಅಂಟಿಸಿ ಇವು ಕಂಪೆನಿಗಳ ಅಧಿಕೃತ ಸಿಲಿಂಡರ್ ಗಳೆಂದು ಸಾರ್ವಜನಿಕರಿಗೆ ನಂಬಿಸಿ ಸರಬರಾಜು ಮಾಡುತ್ತಿರುವುದಾಗಿ ಬೆಳಕಿಗೆ ಬಂದಿದೆ.

ವಶಕ್ಕೆ ಪಡೆದ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಜನನಿಬಿಡ ಪ್ರದೇಶದಲ್ಲಿ ಯಾವುದೇ ಸುರಕ್ಷಿತ ಕ್ರಮಗಳನ್ನು ಪಾಲಿಸದೇ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದುದ್ದಾಗಿ ತಿಳಿಸಿದ್ದಾನೆ.

ದಾಳಿ ಸಮಯದಲ್ಲಿ ಅಧಿಕೃತ ಕಂಪೆನಿಗಳಾದ ಭಾರತ್ ಹಾಗೂ ಇಂಡಿಯನ್ ಗ್ಯಾಸ್ ಕಂಪೆನಿಗಳ ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿದ್ದು, ಇದರಲ್ಲಿ 19 ಕೆ.ಜಿ. ತೂಕದ 31 ಹಾಗೂ 14.2 ಕೆಜಿ ತೂಕದ 71 ಸಣ್ಣ ಸಿಲಿಂಡರ್ ಗಳು ಸೇರಿದಂತೆ ಒಟ್ಟು 110 ಸಿಲಿಂಡರ್ ಹಾಗೂ ರೀಫಿಲ್ಲಿಂಗ್ ಗೆ ಬಳಸಲಾಗುತ್ತಿದ್ದ ರಾಡ್‍ಗಳು ಮತ್ತು ಎರಡು ಗೂಡ್ಸ್ ಕ್ಯಾಂಟರ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News