ಬೆಂಗಳೂರು | ನಿರ್ಮಾಣ ಹಂತದ ಕಟ್ಟಡ ಕುಸಿತ : ಅವಶೇಷಗಳಡಿ ಸಿಲುಕಿ ನಾಲ್ವರು ಮೃತ್ಯು

Update: 2024-10-22 15:46 GMT

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಮತ್ತೊಂದೆಡೆ ನಿರ್ಮಾಣ ಹಂತದ ಕಟ್ಟಡ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಈ ವೇಳೆ ಹಲವರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಮಂಗಳವಾರ ಇಲ್ಲಿನ ಕಮ್ಮನಹಳ್ಳಿ ಬಳಿಯ ಬಾಬುಸಾಹೇಬ್ ಪಾಳ್ಯದಲ್ಲಿ ಈ ಘಟನೆ ಜರುಗಿದ್ದು, ಕಟ್ಟಡದ ಕಾಮಗಾರಿಯ ವೇಳೆಗೆ 15 ಜನಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಾಲ್ವರು ಮೃತಪಟ್ಟಿದ್ದು, ಉಳಿದವರ ರಕ್ಷಣೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಸ್ಥಳಕ್ಕೆ ರಕ್ಷಣಾ ಪಡೆ ಭೇಟಿ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ಕೈಗೊಂಡರು. ಜತೆಗೆ ಘಟನೆ ನಡೆದ ಬೆನ್ನಲ್ಲಿಯೇ ಸ್ಥಳೀಯ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದರು.

ಇನ್ನೂ, ಸ್ಥಳೀಯರು ಘಟನೆ ಕುರಿತು ಪ್ರತಿಕ್ರಿಯಿಸಿ, ‘ಆರು ಅಂತಸ್ತಿನ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಕಟ್ಟಡದ ನಿರ್ಮಾಣ ಕೆಲಸ ನಡೆಯುತ್ತಿತ್ತು. ಬಹುತೇಕ ಕಟ್ಟಡ ನಿರ್ಮಾಣ ಮಾಡಿ, ಪೇಟಿಂಗ್ ಕೆಲಸಗಳು ನಡೆಯುತ್ತಿದ್ದವು’ ಎಂದು ಹೇಳಿದ್ದಾರೆ.

ಘಟನೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇದೇ ವೇಳೆ ಸ್ಥಳಕ್ಕೆ ಸ್ಥಳೀಯ ಶಾಸಕ ಭೈರತಿ ಬಸವರಾಜ್ ಆಗಮಿಸಿ ಪರಿಶೀಲನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News