ಬೆಂಗಳೂರು | ನಿಯಮ ಉಲ್ಲಂಘಿಸಿ ನೀರು ಬಳಕೆ ಮಾಡಿದ 22 ಮನೆಗಳಿಂದ 1 ಲಕ್ಷ ರೂ.ಗಳಿಗೂ ಅಧಿಕ ದಂಡ ವಸೂಲಿ

Update: 2024-03-25 15:12 GMT

ಬೆಂಗಳೂರು: ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕಾರು, ಬೈಕ್‍ಗಳನ್ನು ತೊಳೆದರೆ ದಂಡ ವಿಧಿಸುವುದಾಗಿ ಜಲಮಂಡಳಿ ಸೂಚನೆ ನೀಡಿತ್ತು. ಆದರೂ ನಿಯಮ ಉಲ್ಲಂಘಿಸಿ ವಾಹನ ತೊಳೆಯುತ್ತಿದ್ದವರಿಗೆ ಜಲಮಂಡಳಿಯು 1 ಲಕ್ಷ ರೂ.ಗಳಿಗಿಂತ ಅಧಿಕ ದಂಡವನ್ನು ಸಂಗ್ರಹಿಸಿದೆ.

ನೀರಿನ ಬಳಕೆಯನ್ನು ಮಿತವಾಗಿಸಬೇಕು ಹಾಗೂ ಅನಗತ್ಯವಾಗಿ ಕುಡಿಯುವ ನೀರಿನ ಪೋಲು ಮಾಡಬಾರದು ಎಂದು ಜಲಮಂಡಳಿ ಆದೇಶಿಸಿತ್ತು. ಈ ಆದೇಶವನ್ನು ನಗರದ ಹಲವು ಭಾಗಗಳಲ್ಲಿ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ ಈ ಹಿನ್ನಲೆಯಲ್ಲಿ 22 ಮನೆಗಳಿಗೆ ದಂಡ ವಿಧಿಸಲಾಗಿದೆ.

ನಗರದ ಹಲವು ಭಾಗಗಳಲ್ಲಿ ಕುಡಿಯುವ ನೀರನ್ನು ಬಳಸಿಕೊಂಡು ವಾಹನಗಳನ್ನು ತೊಳೆಯುವುದು, ಅಂಗಳವನ್ನು ತೊಳೆಯುವ ಮೂಲಕ ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ. ಕಾವೇರಿ ನೀರು ಮತ್ತು ಬೋರ್ ವೆಲ್ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸಿದ ಹಿನ್ನೆಲೆ ಜಲಮಂಡಳಿಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಬೆಂಗಳೂರು ಪೂರ್ವ ವಲಯದಲ್ಲಿ 15ಸಾವಿರ ರೂ., ಬೆಂಗಳೂರು ಉತ್ತರ 10ಸಾವಿರ ರೂ., ಬೆಂಗಳೂರು ಈಶಾನ್ಯ ವಲಯದಲ್ಲಿ 5ಸಾವಿರ ರೂ., ಬೆಂಗಳೂರು ಆಗ್ನೇಯ ವಲಯದಲ್ಲಿ 65 ಸಾವಿರ ರೂ., ಬೆಂಗಳೂರು ನೈರುತ್ಯ ವಲಯದಲ್ಲಿ 15ಸಾವಿರ ರೂ.ಗಳು ದಂಡದ ರೂಪದಲ್ಲಿ ಸಂಗ್ರಹವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News