‘ಗಣಪತಿ ಪ್ರತಿಷ್ಠಾಪನೆ’ ಬಲವಂತದಿಂದ ವಸೂಲಿಗಿಳಿದರೆ ಕ್ರಮ : ಬಿ.ದಯಾನಂದ್ ಎಚ್ಚರಿಕೆ

Update: 2024-08-30 16:17 GMT

ಬೆಂಗಳೂರು : ಗಣಪತಿ ಹಬ್ಬಕ್ಕೆ ಬಲವಂತವಾಗಿ ಹಣ ವಸೂಲಿ ಮಾಡುವ ವ್ಯಕ್ತಿಗಳ ಮತ್ತು ಸಂಘ-ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆ.7ರಿಂದ ನಗರಾದ್ಯಂತ ಸಾರ್ವಜನಿಕರು ಗೌರಿ-ಗಣೇಶ ಹಬ್ಬವನ್ನು ಆಚರಿಸುವ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು. ನಗರದ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಅರ್ಜಿಗಳನ್ನು ಪಡೆದುಕೊಳ್ಳಬೇಕು ಎಂದರು.

ಹಿಂದಿನ ಸಾಲಿನಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ವಿಗ್ರಹಗಳ ಆಧಾರದ ಮೇಲೆ ಯಾವ ಯಾವ ಸ್ಥಳಗಳಲ್ಲಿ ಪ್ರಸ್ತುತ ಸಾಲಿನಲ್ಲಿ ಪ್ರತಿಷ್ಠಾಪಿಸಬಹುದು ಎಂಬುದನ್ನು ಗುರುತಿಸಿಕೊಳ್ಳುವುದು. ಸಂಘ-ಸಂಸ್ಥೆಗಳು ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸುವ ಜಾಗ, ದಿನ, ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಮುಂಚಿತವಾಗಿ ಏಕಗವಾಕ್ಷಿ ಮೂಲಕ ಪರವಾನಗಿ ಪಡೆದುಕೊಳ್ಳುವಂತೆ ಸೂಚಿಸಲು ಕೋರಲಾಗಿದೆ ಎಂದು ಅವರು ಹೇಳಿದರು.

ಧ್ವನಿವರ್ಧಕಗಳಿಗೆ ಪರವಾನಗಿ ನೀಡುವಾಗ ನ್ಯಾಯಾಲಯವು ನೀಡರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ ಮತ್ತು ಸರಕಾರವು ಕಾಲ-ಕಾಲಕ್ಕೆ ಹೊರಡಿಸಲಾಗಿರುವ ನಿಯಮಗಳು/ಮಾರ್ಗಸೂಚಿಗಳು ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡತಕ್ಕದ್ದು. ರಾತ್ರಿ 10ಗಂಟೆಯಿಂದ ಬೆಳಗ್ಗೆ 6ರವರೆಗೆ ಯಾವುದೇ ಕಾರಣಕ್ಕೂ ಧ್ವನಿವರ್ಧಕಗಳನ್ನು ಬಳಸಲು ಅವಕಾಶ ನೀಡಬಾರದು ಎಂದು ಬಿ.ದಯಾನಂದ್ ತಿಳಿಸಿದರು.

ಕೆಲವು ವ್ಯಕ್ತಿಗಳು, ಸಂಸ್ಥೆಗಳ ಹೆಸರಿನಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಂದ ಉತ್ಸವದ ಆಚರಣೆಗೆ ಬಲವಂತವಾಗಿ ಹಣ, ವಂತಿಕೆಯನ್ನು ವಸೂಲಿ ಮಾಡುವ ವ್ಯಕ್ತಿಗಳ ಮತ್ತು ಸಂಘ ಸಂಸ್ಥೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ದಯಾನಂದ್ ಎಚ್ಚರಿಸಿದರು.

ಗಣಪತಿ ಉತ್ಸವಕ್ಕೆಂದು ಹೇಳಿ, ಹಣ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಮನೆಯೊಳಕ್ಕೆ ಪ್ರವೇಶಿಸಿ, ದರೋಡೆ, ಸುಲಿಗೆಯಂತಹ ಕೃತ್ಯಗಳನ್ನು ನಡೆಸುವ ಸಾಧ್ಯತೆಗಳಿರುವುದರಿಂದ, ಠಾಣಾಧಿಕಾರಿಗಳು ಈ ಬಗ್ಗೆ ಸೂಕ್ತ ತಿಳುವಳಿಕೆಯನ್ನು/ಮಾರ್ಗದರ್ಶನಗಳನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಬಿ.ದಯಾನಂದ್ ಸೂಚಿಸಿದರು.

ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸುವ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಜಾಗಗಳಲ್ಲಿ ವ್ಯವಸ್ಥಾಪಕರಿಂದ ಮುಂಚಿತವಾಗಿ ಕಾರ್ಯಕ್ರಮದ ಬಗ್ಗೆ ಲಿಖಿತ ಕೋರಿಕೆಯನ್ನು ಸ್ವೀಕರಿಸಿ, ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಡಿಸುವುದು. ಆಯೋಜಕರು ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳದಲ್ಲಿ ಕಡ್ಡಾಯವಾಗಿ ಅಗ್ನಿಶಾಮಕ ವಾಹನವನ್ನು ಅಳವಡಿಸಿಕೊಳ್ಳಬೇಕು. ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಕನಿಷ್ಠ 5 ಸಿ.ಸಿ.ಟಿ.ವಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಬಿ.ದಯಾನಂದ್ ತಿಳಿಸಿದರು.

ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡುವ ದಿನದಿಂದ ವಿಗ್ರಹಗಳ ವಿಸರ್ಜನೆ ಮುಗಿಯುವವರೆಗೂ ಸ್ಥಳೀಯ ಪೊಲೀಸರನ್ನು ಸಂಬಂಧಪಟ್ಟ ಸ್ಥಳಗಳಲ್ಲಿ ತಪ್ಪದೇ ನೇಮಿಸಲು ಅಗತ್ಯ ಕ್ರಮ ಕೈಗೊಳ್ಳಲು ಎಲ್ಲಾ ವಿಭಾಗೀಯ ಉಪ ಪೊಲೀಸ್ ಆಯುಕ್ತರುಗಳಿಗೆ ಬಿ.ದಯಾನಂದ್ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News