ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರಿಗೆ ಕೊನೆಗೂ ತಂಪೆರೆದ ಮಳೆ
ಬೆಂಗಳೂರು: ನಗರದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದ ಸಂದರ್ಭದಲ್ಲೇ ಗುರುವಾರ ಸಂಜೆ ತುಂತುರು ಮಳೆಯಾಗಿದ್ದು, ನಗರದ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಕುಮಾರಸ್ವಾಮಿ ಲೇಔಟ್, ವರ್ತೂರು, ಸಿವಿ ರಾಮನ್ ನಗರ, ಕಾರ್ಪೊರೇಶನ್, ವೈಟ್ ಫೀಲ್ಡ್, ಕಾಡುಗೋಡಿ, ಹೋಫಾರಂ ಕಡೆ ಮಳೆಯಾಗಿದೆ.
ಎರಡು ದಿನಗಳಿಂದ ರಾಜಧಾನಿಯಲ್ಲಿ ಉಷ್ಣಾಂಶ 35 ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗಿತ್ತು. ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಏಕಾಏಕಿ ಮಳೆ ಬಂದರೂ ನೆನೆದುಕೊಂಡೆ ಜನ ಪ್ರಯಾಣಿಸಿದ ದೃಷ್ಯಗಳು ಕಂಡು ಬಂದವು.
ಶ್ರೀನಗರ, ಗಿರಿನಗರ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಮೈಸೂರು ರಸ್ತೆ ಬ್ಯಾಟರಾಯನಪುರ ಬಳಿ ಅಂಗಡಿಗಳ ಮೇಲ್ಛಾವಣಿ ಹಾರಿದೆ. 30-40 ಕಿ.ಮಿ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗುಡುಗು ಸಿಡಿಲು ಸಹಿತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.