ಬೆಂಗಳೂರು | ತಂಗಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅಕ್ಕನ ಬಂಧನ

Update: 2024-08-30 14:43 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ತಂಗಿ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣದಡಿ ಅಕ್ಕನನ್ನು ಇಲ್ಲಿನ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ, 5.50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಶಶಿಕಲಾ(30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯ ತಂಗಿ ಚಂದ್ರಿಕಾ ನೀಡಿದ ದೂರಿನನ್ವಯ ಅಕ್ಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಡುಗೋಡಿ ವಿಎಸ್‍ಆರ್ ಬಡಾವಣೆಯಲ್ಲಿ ವಾಸವಾಗಿರುವ ಚಂದ್ರಿಕಾ, ಪಿ.ಜಿ.ಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ಪತಿ ಶರವಣ ಟಾಟಾ ಎಸಿ ವಾಹನ ಚಾಲಕನಾಗಿದ್ದ. ಕೆಲ ದಿನಗಳ ಹಿಂದೆ ಪತಿಗೆ ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೂಗೂರಿನಲ್ಲಿರುವ ಅಕ್ಕನ ಮನೆಗೆ ವಿಶ್ರಾಂತಿಗಾಗಿ ತಂಗಿ ಆ.15ರಂದು ಹೋಗಿದ್ದರು ಎನ್ನಲಾಗಿದೆ.

ಈ ಮಧ್ಯೆ ಔಷಧಿ ತರುವಂತೆ ಅಕ್ಕ ಶಶಿಕಲಾಗೆ ತಂಗಿ ಚಂದ್ರಿಕಾ ಸೂಚಿಸಿ ದ್ವಿಚಕ್ರ ವಾಹನದ ಕೀ ನೀಡಿದ್ದಳು. ಆ ಕೀ ಪಂಚ್‍ನಲ್ಲಿ ಮನೆಯ ಕೂಡ ಕೀ ಇತ್ತು. ಇದನ್ನು ಗಮನಿಸಿದ ಶಶಿಕಲಾ, ದ್ವಿಚಕ್ರವಾಹನದ ಮೂಲಕ ನೇರವಾಗಿ ಆಡುಗೋಡಿಯಲ್ಲಿರುವ ತಂಗಿ ಮನೆಗೆ ಬಂದಿದ್ದಳು. ಮಾರ್ಗ ಮಧ್ಯೆ ಈಕೆ ದೊಡ್ಡಮ್ಮನನ್ನು ಕರೆದುಕೊಂಡು ಬಂದಿದ್ದಳು. ತಂಗಿ ಮನೆಗೆ ಸುಮಾರು 100 ಮೀಟರ್ ದೂರವಿರುವಾಗ ದೊಡ್ಡಮ್ಮನನ್ನು ಇಳಿಸಿದ್ದಳು ಎಂದು ಹೇಳಲಾಗಿದೆ.

ಬಳಿಕ ತಂಗಿಯ ಮನೆಯ ಬೀಗ ತೆಗೆದು ಒಳ ನುಗ್ಗಿದ್ದಾಳೆ. ಬೀರುವಿನ ಕೀ ಹುಡುಕಾಡಿದ್ದಾಳೆ. ಸಿಗದಿದ್ದಾಗ ಬೀರು ಒಡೆದು 74 ಗ್ರಾಂ ಚಿನ್ನ ಹಾಗೂ 354 ಗ್ರಾಂ ಬೆಳ್ಳಿ ಆಭರಣ ಕದ್ದಿದ್ದಾಳೆ. ಬಳಿಕ ಆ.20ರಂದು ಮನೆಗೆ ಬಂದು ತಂಗಿ ಚಂದ್ರಿಕಾ ನೋಡಿದಾಗ ಕಳ್ಳತನವಾಗಿದೆ ಎಂದು ಭಾವಿಸಿ ದೂರು ನೀಡಿದ್ದಳು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಚಂದ್ರಿಕಾ ಅವರ ಮನೆ ಸುತ್ತಮುತ್ತ ಅಳವಡಿಸಿದ್ದ ಸಿಸಿಟಿವಿಯಲ್ಲಿ ಅಕ್ಕ ಬಂದು ಹೋಗಿರುವ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಕಳ್ಳತನ ಕೃತ್ಯದ ಬಗ್ಗೆ ನಿರಾಕರಿಸಿದ್ದಳು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ತೀವ್ರವಾಗಿ ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News