ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಹಿಂಸೆ ತಡೆ ಸಮಿತಿ ರಚಿಸುವಂತೆ ಸೂಚನೆ

Update: 2024-09-24 13:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಎಲ್ಲ ಆಸ್ಪತ್ರೆಗಳು ಸೇರಿದಂತೆ ಮೆಡಿಕಲ್ ಕಾಲೇಜುಗಳಲ್ಲಿ ಭದ್ರತೆ ಹೆಚ್ಚಿಸಲು ಮತ್ತು ವೈದ್ಯರ ಮೇಲೆ ಹಲ್ಲೆ ತಡೆಗಟ್ಟಲು ಭದ್ರತಾ ಮತ್ತು ಹಿಂಸೆ ತಡೆ ಸಮಿತಿ ಸ್ಥಾಪಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ಭದ್ರತೆ ಮತ್ತು ಹಿಂಸೆ ತಡೆ ಸಮಿತಿಗೆ ಅಧ್ಯಕ್ಷರಾಗಿ ಆಸ್ಪತ್ರೆಯ ಸರ್ಜನ್, ಮುಖ್ಯಸ್ಥರು ಅಥವಾ ಡೀನ್ ನೇಮಕವಾಗಬೇಕು. ಸದಸ್ಯ ಕಾರ್ಯದರ್ಶಿಯಾಗಿ ಪ್ರಾದೇಶಿಕ ವೈದ್ಯಾಧಿಕಾರಿ ಅಥವಾ ಆಡಳಿತಾಧಿಕಾರಿ ಇರಬೇಕು. ಸಮಿತಿ ಸದಸ್ಯರಾಗಿ ಮಹಿಳಾ ವೈದ್ಯೆ, ಕಿರಿಯ ವೈದ್ಯರಿರಬೇಕೆಂದು ಸೂಚಿಸಲಾಗಿದೆ.

ಸಮಿತಿಯು ಅಭಿವೃದ್ಧಿ, ಮೇಲ್ವಿಚಾರಣೆ ಮತ್ತು ಅನುಷ್ಠಾನದ ಜವಾಬ್ದಾರಿ ನಿಭಾಯಿಸಬೇಕು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಅಂತಹ ವ್ಯಕ್ತಿಗೆ ಗರಿಷ್ಠ 7 ವರ್ಷಗಳವರೆಗೆ ಶಿಕ್ಷೆ ಹಾಗೂ 2 ಲಕ್ಷ ರೂ.ವರೆಗೂ ದಂಡ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಜತೆಗೆ ಇತ್ತೀಚಿನ ದಿನಗಳಲ್ಲಿ ರೋಗಿ ಮತ್ತು ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ ನಡೆಯುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಎಲ್ಲ ಆಸ್ಪತ್ರೆಗಳಲ್ಲಿ ಕಾನೂನು ನಿಬಂಧನೆ ಫಲಕಗಳನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರು ಆದೇಶಿಸಿದ್ದಾರೆ.

ಆರೋಗ್ಯ ಸಿಬ್ಬಂದಿಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವಂತಿಲ್ಲ. ಅವಮಾನಿಸಿದಲ್ಲಿ ಅಂತಹ ವ್ಯಕ್ತಿಗೆ 3 ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ 10 ಸಾವಿರ ರೂ.ಗಳವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲಾಗುತ್ತದೆ.

ಆಸ್ಪತ್ರೆಯ ಆಸ್ತಿ ನಷ್ಟ ಅಥವಾ ಯಾವುದೇ ಉಪಕರಣಗಳಿಗೆ ಹಾನಿಯಂಟು ಮಾಡಿದರೆ ಖರೀದಿ ಬೆಲೆಯ ಎರಡು ಪಟ್ಟು ದಂಡಕ್ಕೆ ಕಟ್ಟಬೇಕಾಗುತ್ತದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಐಸಿ ಹಾಗೂ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಭೇಟಿಯಾಗ ಬಯಸುವವರಿಗೆ ಪಾಸ್ ಕಡ್ಡಾಯಗೊಳಿಸಬೇಕು ಎಂದಿದ್ದಾರೆ.

ಆಸ್ಪತ್ರೆಗಳು 24/7 ಮಾನವ ಸಹಿತ ಭದ್ರತಾ ನಿಯಂತ್ರಣ ಕೊಠಡಿ ಸ್ಥಾಪಿಸಬೇಕು ಹಾಗೂ ಆಸ್ಪತ್ರೆಯ ಮಹಿಳೆಯರ ಲೈಂಗಿಕ ಕಿರುಕುಳ ತಪ್ಪಿಸುವ ಉದ್ದೇಶದಿಂದ ಆಂತರಿಕ ಸಮಿತಿ ರಚಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News