ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

Update: 2024-09-24 16:38 GMT

ಬೆಂಗಳೂರು : ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿಎಲ್) ಸ್ಥಾಪಿಸಿರುವ ರಾಜ್ಯದ ಮೊಟ್ಟ ಮೊದಲ 370 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ಯಲಹಂತ ಸಂಯುಕ್ತ ವಿದ್ಯುತ್ ಸ್ಥಾವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.

ಯಲಹಂಕದ ಕೆಪಿಸಿಎಲ್ ಯೋಜನಾ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಈ ವಿದ್ಯುತ್ ಸ್ಥಾವರನ್ನು ಮಂಗಳವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸ್ಥಾವರ ಉದ್ಘಾಟನೆ ಮೂಲಕ ಭವಿಷ್ಯದ ಬೇಡಿಕೆಗೆ ಅಗತ್ಯ ವಿದ್ಯುತ್ ಉತ್ಪಾದನೆಯತ್ತ ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದರು.

2016ರಲ್ಲಿ ಈ ಸ್ಥಾವರ ಸ್ಥಾಪನೆಗೆ ಮುಖ್ಯಮಂತ್ರಿಯಾಗಿ ನಾನೇ ಅಡಿಗಲ್ಲು ಹಾಕಿದ್ದೆ. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು. ಕೆ.ಜೆ.ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು. ಇದೀಗ ಎಂಟು ವರ್ಷಗಳ ಬಳಿಕ ಮುಖ್ಯಮಂತ್ರಿಯಾಗಿ ಸ್ಥಾವರ ಲೋಕಾರ್ಪಣೆ ಮಾಡಿದ್ದೇನೆ ಎಂದು ಅವರು ಹೇಳಿದರು.

ವಿದ್ಯುತ್‍ನಲ್ಲಿ ಸ್ವಾವಲಂಬನೆ ಸಾಧ್ಯವಾಗದಿದ್ದರೆ ಆರ್ಥಿಕ ಪ್ರಗತಿ ಸಾಧ್ಯವಿಲ್ಲ, ವಾಣಿಜ್ಯ, ಕೃಷಿ, ಗೃಹ ಬಳಕೆಗೆ ವಿದ್ಯುತ್ ಅನಿವಾರ್ಯ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾಲಂಬನೆ ಸಾಧಿಸದಿದ್ದಲ್ಲಿ ಜಿಡಿಪಿ ಬೆಳವಣಿಗೆಯೂ ಆಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಗುಣಮಟ್ಟದ ವಿದ್ಯುತ್ ಪೂರೈಕೆ ಜತೆಗೆ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಆದ್ಯತೆ ನೀಡುತ್ತದೆ, ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬೇಸಿಗೆಯಲ್ಲಿ 16 ರಿಂದ 17 ಸಾವಿರ ಮೆಗಾವ್ಯಾಟ್ ಮತ್ತು ಮಳೆಗಾಲದಲ್ಲಿ 15ರಿಂದ 16 ಸಾವಿರ ಮೆಗಾವ್ಯಾಟ್ ಯೂನಿಟ್ ವಿದ್ಯುತ್ ಬೇಡಿಕೆ ಇದೆ. ಕಳೆದ ವರ್ಷ ತೀವ್ರ ಬರಗಾಲವಿದ್ದರೂ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೂ ಭವಿಷ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡು 2030ರ ವೇಳೆಗೆ ಈಗಿರುವ 34,639 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವನ್ನು 60 ಸಾವಿರ ಮೆಗಾವ್ಯಾಟ್ ಗೆ ಹೆಚ್ಚಿಸಲು ಬಜೆಟ್ ನಲ್ಲಿ ಘೋಷಿಸಿದ್ದು, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕುಸುಮ್‍ಗೆ ನನ್ನ ಯೋಜನೆಯೇ ಪ್ರೇರಣೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದ ಜನತೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ನಾಗರಿಕರಿಗೆ ಈ ಅನಿಲ ವಿದ್ಯುತ್ ಸ್ಥಾವರ ನಮ್ಮ ಸರಕಾರದ ಕೊಡಗೆ. ನಾವು ಅಧಿಕಾರದಲ್ಲಿದ್ದಾಗಲೆಲ್ಲಾ ರಾಜ್ಯ ನೆನಪಿಟ್ಟುಕೊಳ್ಳುವಂಥ ಕೊಡುಗೆ ಕೊಟ್ಟಿದ್ದೇವೆ, ಮುಂದೆಯೂ ಕೊಡುತ್ತೇವೆ ಎಂದರು.

ಹಿಂದೆ ನಾವು ಅಧಿಕಾರದಲ್ಲಿದ್ದಾಗಲೇ ಈ ಘಟಕದ ಶಂಕುಸ್ಥಾಪನೆ ನೆರವೇರಿಸಿದ್ದೆವು. ಈಗ ನಮ್ಮ ಸರಕಾರವೇ ಅದನ್ನು ಲೋಕಾರ್ಪಣೆ ಮಾಡುತ್ತಿದೆ. ಹಿಂದೆ ಇದೇ ಸ್ಥಳದಲ್ಲಿದ್ದ ಡೀಸೆಲ್ ವಿದ್ಯುತ್ ಘಟಕ ಸ್ಥಗಿತಗೊಳಿಸಿ, ಅತ್ಯಾಧುನಿಕ ತಂತ್ರಜ್ಞಾನದ ಅನಿಲ ಸ್ಥಾವರ ಸ್ಥಾಪಿಸಲಾಗಿದೆ. ನಾನು ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಮುಂದಿಟ್ಟ ಆಲೋಚನೆಯನ್ನೂ ಕೂಡಲೇ ಕಾರ್ಯಗತಗೊಳಿಸಲು ಪ್ರಯತ್ನಿಸಿ ಪ್ರಾರಂಭಿಸಿದ ಕೆಲಸ ಇದು ಸಾಕಾರಗೊಂಡಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.

ಪಾವಗಡ ಸೋಲಾರ್ ಪಾರ್ಕ್ ಮಾಡಿದ್ದು ಇತಿಹಾಸ, ಭೂಮಿಯನ್ನು ಲೀಸ್ ಪಡೆದು ಯೋಜನೆ ಮಾಡುತ್ತಿರುವುದು ಜಗತ್ತಿಗೆ ಮಾದರಿ. ಕೃಷಿ ಪಂಪ್‍ಸೆಟ್‍ಗಳಿಗೆ ಸೋಲಾರ್ ವಿದ್ಯುತ್ ಪೂರೈಸುವ ಯೋಜನೆಗೆ ಅಡಿಪಾಯ ಹಾಕಿದ್ದೇ ನಾವು. ಅದನ್ನು ಈಗ ಕೇಂದ್ರ ಸರಕಾರ ಕುಸುಮ್ ಎಂಬ ಹೆಸರಿಟ್ಟು ಜಾರಿಗೊಳಿಸಿದೆ. ಜಾರ್ಜ್ ಅವರು ಈ ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವರು ಎಂದು ಶಿವಕುಮಾರ್ ಹೇಳಿದರು.

ಮೇಕೆದಾಟು ಯೋಜನೆ ನನ್ನ ಕನಸು. ಇದನ್ನು ಅನುಷ್ಠಾನಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದೇನೆ. ಈ ಯೋಜನೆ ಪೂರ್ಣಗೊಂಡರೆ ಅದರಿಂದ 400 ಮೆಗಾವ್ಯಾಟ್ ಉತ್ಪಾದನೆ ಸಾಧ್ಯ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ನಮ್ಮ ಸರಕಾರದ ಇಚ್ಛಾಶಕ್ತಿಯ ಫಲ ಇದು: ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯದ ಪ್ರಥಮ ಅನಿಲ ವಿದ್ಯುತ್ ಸ್ಥಾವರದ ಉದ್ಘಾಟನೆ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಸರಕಾರದ ಇಚ್ಛಾ ಶಕ್ತಿಯಿಂದಷ್ಟೇ ಮುಚ್ಚಿದ ಘಟಕವನ್ನು ಪುನರ್ ಸ್ಥಾಪಿಸಲು ಸಾಧ್ಯವಾಗಿದೆ. ಅಗ್ನಿ ಅವಘಡ, ಸುಪ್ರೀಂಕೋರ್ಟ್ ತಡೆಯಾಜ್ಞೆಯಂಥ ಹಲವು ವಿಘ್ನಗಳನ್ನು ನಿವಾರಿಸಿ ಈ ಹಂತ ತಲುಪಿದ್ದೇವೆ ಎಂದು ಹೇಳಿದರು.

ಗೇಲ್ ಒಪ್ಪಂದದ ಪೇ ಅಂಡ್ ಟೇಕ್ ಷರತ್ತಿನ ನಿಬಂಧನೆಯನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸುವಂಥ ಎಲ್ಲ ಕೆಲಸಗಳು ನಮ್ಮ ಮುಖ್ಯಮಂತ್ರಿಯ ಮಾರ್ಗದರ್ಶನದಲ್ಲಿ ಆಗಿದೆ. ಅಂದು ಅವರು ಶಂಕು ಸ್ಥಾಪನೆ ನೆರವೇರಿಸಿದ್ದ ಘಟಕವನ್ನು ಅವರೇ ಇದು ಉದ್ಘಾಟಿಸಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್, ನಸೀರ್ ಅಹ್ಮದ್, ಶಾಸಕ ಎಸ್.ಆರ್. ವಿಶ್ವನಾಥ್, ಕೆಕೆಆರ್‍ಡಿಬಿ ಅಧ್ಯಕ್ಷ ಅಜಯ್ ಸಿಂಗ್, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಬಿಎಚ್‍ಇಎಲ್ ಅಧ್ಯಕ್ಷ ಕೊಪ್ಪು ಸದಾಶಿವಮೂರ್ತಿ, ಗೇಲ್ ಅಧ್ಯಕ್ಷ ಸಂದೀಪ್ ಕುಮಾರ್ ಗುಪ್ತ, ಕೆಇಆರ್‍ಸಿ ಸದಸ್ಯರಾದ ಜಾವೇದ್ ಅಖ್ತರ್, ಜಗದೀಶ್, ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮತ್ತಿತರರು ಇದ್ದರು.

ವೈಸಿಸಿಪಿಪಿ ಉದ್ಯೋಗಿಗಳಿಗೆ 5 ಸಾವಿರ ರೂ. ಬೋನಸ್: ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರದ ಎಲ್ಲ ಉದ್ಯೋಗಿಗಳಿಗೆ 5 ಸಾವಿರ ರೂ. ಬೋನಸ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಹಿಂದೆ ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರ ಲೋಕಾರ್ಪಣೆ ಸಂದರ್ಭದಲ್ಲಿ ಅಲ್ಲಿನ ಉದ್ಯೋಗಿಗಳಿಗೆ ಬೋನಸ್ ನೀಡಲಾಗಿತ್ತು. ಅದೇ ಮಾದರಿಯಲ್ಲಿ ಈ ಸ್ಥಾವರದ ಉದ್ಯೋಗಿಗಳಿಗೂ ಬೋನಸ್ ನೀಡುವುದಾಗಿ ಕೆಪಿಸಿಎಲ್ ಅಧ್ಯಕ್ಷನಾಗಿ ಘೋಷಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News