ಬೆಂ.ಗ್ರಾ.ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗಾಗಿ ಕೆ.ಎಚ್.ಮುನಿಯಪ್ಪ ಮನವಿ

Update: 2024-09-24 15:34 GMT

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ಅವರನ್ನು ಭೇಟಿ ಮಾಡಿದ ಕೆ.ಎಚ್‌.ಮುನಿಯಪ್ಪ

ಹೊಸದಿಲ್ಲಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನುರಿತ ಮತ್ತು ಕೌಶಲ್ಯ ರಹಿತ ಯುವಕರನ್ನು ಹೊಂದಿದ್ದು, ಕೈಗಾರಿಕೆಗಳ ಬೇಡಿಕೆ ಆಧಾರಿತ ಕೌಶಲ್ಯ ತರಬೇತಿಗಳನ್ನು ನೀಡಲು ಅನುಕೂಲವಾಗುವಂತೆ ದೇವನಹಳ್ಳಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಸಹಕರಿಸುವಂತೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮನವಿ ಮಾಡಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿರುವ ಇಎಸ್‍ಐ ಭವನದಲ್ಲಿ ಕೇಂದ್ರದ ಸೂಕ್ಷ್ಮ ಮತ್ತು ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ರವರನ್ನು ಭೇಟಿ ಮಾಡಿ ಅವರು ಮನವಿ ಸಲ್ಲಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉದ್ಯಮ ಪೋರ್ಟಲ್ ಅಡಿಯಲ್ಲಿ ನೋಂದಾಯಿಸಲಾದ 45 ಸಾವಿರ ಎಂ.ಎಸ್.ಎಂ.ಇ ಘಟಕಗಳು ಸುಮಾರು ನಾಲ್ಕು ಲಕ್ಷ ಉದ್ಯೋಗಾವಕಾಶದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯ ತರಬೇತಿಯನ್ನು ಯುವಕರಿಗೆ ನೀಡಲು ತರಬೇತಿ ಕೇಂದ್ರದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಈ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕಿಗೆ ಉದ್ಯಮದ ಬೇಡಿಕೆ ಆಧಾರಿತ ಎನ್‍ಎಸ್‍ಐಸಿ ತಾಂತ್ರಿಕ ಸೇವಾ ಕೇಂದ್ರ, ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಮಂಜೂರು ಮಾಡಬೇಕು. ಉತ್ತಮ ಕೈಗಾರಿಕೆಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಮಿ ಮತ್ತು ಇತರ ಮೂಲಸೌಕರ್ಯಗಳಾದ ರಸ್ತೆ, ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಒದಗಿಸಲು ತಾವು ಸಿದ್ಧರಿದ್ದೇವೆ ಎಂದು ಮುನಿಯಪ್ಪ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News