ಬಿಜೆಪಿ ನಾಯಕರು ಸಿಎಂ ರಾಜೀನಾಮೆ ಕೇಳುತ್ತಿರುವುದು ಅಪಹಾಸ್ಯ: ಎಸ್.ಮನೋಹರ್

Update: 2024-09-24 14:44 GMT

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆಂದು ಅವರ ಪಕ್ಷದ ನಾಯಕರು ಈಗಾಗಲೇ ಪಕ್ಷದ ಹೈಕಮಾಂಡ್‍ಗೆ ದೂರು ಸಲ್ಲಿಸಿದ್ದಾರೆ. ಆದುದರಿಂದ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜೀನಾಮೆ ಕೇಳುತ್ತಿರುವುದು ಅಪಹಾಸ್ಯವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಲೇವಡಿ ಮಾಡಿದ್ದಾರೆ.

ಮಂಗಳವಾರ ನಗರದ ಕಾಂಗ್ರೆಸ್ ಭವನದ ಎದುರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ನೀಡಲು ಹಾಗೂ ರಾಜೀನಾಮೆ ಕೇಳುತ್ತಿರುವ ಬಿಜೆಪಿಯ ವಿರುದ್ಧದ ಪ್ರತಿಭಟನೆಯ ವೇಳೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಭ್ರಷ್ಟಾಚಾರದಲ್ಲಿ ಮುಳುಗಿ ಜೈಲುವಾಸ ಸೇರಿದ್ದು ಹೆಚ್ಚು ಅನುಭವವಾಗಿದೆ. ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ರಾಜ್ಯಕ್ಕೆ, ದೇಶಕ್ಕೆ ಮಾದರಿ ಆಡಳಿತ ನೀಡುತ್ತಿದ್ದಾರೆ. ಅವರ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ಉರುಳಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ಪಕ್ಷದ ವರಿಷ್ಠರು, ಶಾಸಕಾಂಗ ಪಕ್ಷ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯದ ಜನತೆ ನಿಂತಿದ್ದಾರೆ. ಆದ್ದರಿಂದ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ. ರಾಜೀನಾಮೆ ನೀಡಬೇಕಾಗಿರುವುದು ಬಿಜೆಪಿಯ ಭ್ರಷ್ಟರು ಎಂದು ಟೀಕಿಸಿದರು.

ರಾಜ್ಯಪಾಲರು ಭ್ರಷ್ಟಾಚಾರದ ಬಗ್ಗೆ ಇಬ್ಬಾಗ ನೀತಿ ಅನುಸರಿಸುತ್ತಿರುವುದು ಅವರ ನಡವಳಿಕೆಯಿಂದ ಬಹಿರಂಗವಾಗಿದೆ. ರಾಜ್ಯಪಾಲರು ಎಲ್ಲರ ವಿರುದ್ಧವೂ ಸಮಾನವಾದ ರೀತಿಯಲ್ಲಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕು. ಸೇಡಿನ ರಾಜಕೀಯ ಹಾಗೂ ಬಿಜೆಪಿ ವಕ್ತಾರರಂತೆ ವರ್ತಿಸಬಾರದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಪ್ರಕಾಶ್, ವೈ.ಪುಟ್ಟರಾಜು, ಹೇಮರಾಜು, ಚಿನ್ನಿ ಪ್ರಕಾಶ, ಉಮೇಶ್, ಚಂದ್ರಶೇಖರ ಓಬಳೇಶ, ಮಧು, ರಂಜಿತ್, ಗಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News