ಎಚ್.ಎಸ್.ಶ್ರೀಮತಿ ಕನ್ನಡದ ಬೆಲ್‍ಹುಕ್ಸ್ : ಡಾ.ಅರುಣ್ ಜೋಳದ ಕೂಡ್ಲಿಗಿ

Update: 2024-10-26 16:01 GMT

ಬೆಂಗಳೂರು : ಬೇರೆ ಭಾಷೆಗಳಿಗೆ ಹೋಲಿಸಿದರೆ ಬೆಲ್‍ಹುಕ್ಸ್ ಅವರ ಕೃತಿಗಳು ಕನ್ನಡದಲ್ಲೇ ಹೆಚ್ಚು ಪ್ರಕಟವಾಗಿವೆ. ಬೆಲ್‍ಹುಕ್ಸ್ ಅವರನ್ನು ಕನ್ನಡದ ವಿವೇಕದ ಭಾಗವಾಗಿ ಮಾಡಿದ ಎಚ್.ಎಸ್.ಶ್ರೀಮತಿ ಅವರು ಕನ್ನಡದ ಬೆಲ್‍ಹುಕ್ಸ್ ಇದ್ದಂತೆ ಎಂದು ಅಂಕಣಕಾರ ಡಾ.ಅರುಣ್ ಜೋಳದಕೂಡ್ಲಿಗಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಚಿತ್ರಕಲಾ ಪರಿಷತ್‍ನ ಡಿ.ದೇವರಾಜ ಅರಸು ಗ್ಯಾಲರಿಯಲ್ಲಿ ಜೀರುಂಡೆ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಎಚ್.ಎಸ್.ಶ್ರೀಮತಿ ನಿರೂಪಣೆಯ ಬೆಲ್‍ಹುಕ್ಸ್ ಅವರ ಬಂಧಮುಕ್ತ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿರಂತರವಾಗಿ ಸ್ತ್ರೀವಾದದ ಪಯಣ ಕನ್ನಡ ವಿವೇಕದ ಜತೆಗೆ ಬಂದಿದೆ. ಬೆಲ್‍ಹುಕ್ಸ್ ಆಲೋಚನೆಗಳನ್ನು ಕರ್ನಾಟಕದ ವಿದ್ಯಮಾನದ ಜತೆಗೆ ಬೆಸೆದು ಮಾತನಾಡುವ ನೆಲೆಗೆ ಆಪ್ತವಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕನ್ನಡಕ್ಕೆ ಬೆಲ್‍ಹುಕ್ಸ್ ಅವರ 5 ಕೃತಿಗಳು ಬಂದಿರುವುದರಿಂದ ಮುಂದೆ ಹೆಚ್ಚು ಚರ್ಚೆಗೆ ಒಳಗಾಗುವ ಆಶಾವಾದವಿದೆ. ಬಂಧಮುಕ್ತ ಕೃತಿ ತುಂಬಾ ವಿಸ್ತಾರವಾದ ಕೃತಿಯಾಗಿದೆ. ಇಡೀ ಕೃತಿಯೊಳಗೆ ಪ್ರೀತಿ ಪ್ರೇಮದ ವ್ಯಾಖ್ಯಾನವನ್ನು ವಿಶಿಷ್ಟವಾಗಿ ಮಂಡಿಸುತ್ತಾ ಹೋಗುತ್ತಾರೆ. ಇಡೀ ಪುಸ್ತಕದಲ್ಲಿ ಬಿಳಿಯರು ಕಪ್ಪುಜನರ ಬಗ್ಗೆ ಕಟ್ಟಿದ ಮಿಥ್‍ಗಳನ್ನು ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಅರುಣ್ ಜೋಳದ ಕೂಡ್ಲಿಗಿ ತಿಳಿಸಿದರು.

ಪತ್ರಕರ್ತ ಗುರುಪ್ರಸಾದ್ ಮಾತನಾಡಿ, ಸ್ತ್ರೀವಾದದ ಕೆಲವು ಪುಸ್ತಕಗಳನ್ನು ಓದಿದರೂ ಕೂಡ ಅದನ್ನು ಆಚರಿಸುವುದು ಸುಲಭವಾದ ಕೆಲಸವಲ್ಲ. ತಿಳುವಳಿಕೆಯಿಂದ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಸವಾಲಿನ ಕೆಲಸವಾಗಿದೆ. ಅದರಿಂದ ಹಲವು ಸಂಘರ್ಷವಾಗುತ್ತವೆ. ನಮ್ಮ ನಮ್ಮ ಕ್ಷೇತ್ರಗಳಲ್ಲಿ ಬೆಲ್‍ಹುಕ್ಸ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಲೇಖಕಿ ಎಚ್.ಎಸ್.ಶ್ರೀಮತಿ, ಪ್ರಕಾಶಕ ಧನಂಜಯ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News