ಬೆಂಗಳೂರು : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಎದುರಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಬೆಂಗಳೂರು : ನ್ಯಾಯಾಲಯದ ವಿಚಾರಣೆ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೈಕೋರ್ಟ್‌ನ ಹಾಲ್ ಸಂಖ್ಯೆ 1ರಲ್ಲಿ ನಡೆದಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಎಚ್.ಬಿ.ಪ್ರಭಾಕರ್ ಶಾಸ್ತ್ರಿ ಅವರ ಪೀಠದ ಮುಂದೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ವ್ಯಕ್ತಿ ಕತ್ತು ಕೊಯ್ದುಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ವ್ಯಕ್ತಿಯನ್ನು ವೈದ್ಯರ ಬಳಿಗೆ ಕರೆದೊಯ್ಯಲು ಪೊಲೀಸರಿಗೆ ಪೀಠ ಸೂಚಿಸಿತು.
ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಇದೇ ವೇಳೆ, ಬ್ಲೇಡ್ ಮುಟ್ಟಬೇಡಿ. ಸ್ಥಳದ ಪಂಚನಾಮೆ ನಡೆಸಬೇಕು ಎಂದು ನ್ಯಾಯಮೂರ್ತಿಗಳು ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿದರು. ಸಾಕಷ್ಟು ಭದ್ರತೆ ಇದ್ದರೂ ಆ ವ್ಯಕ್ತಿ ಹೇಗೆ ಕೋರ್ಟ್ ಹಾಲ್ ಒಳಗೆ ನುಸುಳಿದರು ಎಂಬುದು ತಿಳಿದು ಬರಬೇಕಿದೆ.
ಹೈಕೋರ್ಟ್ ಭದ್ರತೆಗೆ ನಿಯೋಜಿಸಿರುವ ಪೊಲೀಸರು ಎಲ್ಲಿ ಹೋಗಿದ್ದಾರೆ ಎಂದು ನ್ಯಾ.ಎಚ್.ಬಿ.ಪ್ರಭಾಕರ್ ಶಾಸ್ತ್ರಿ ಪ್ರಶ್ನಿಸಿದರು."ಆತ ನೀಡಿದ ಕಡತವನ್ನು ನೀವೇಕೆ ಪಡೆದುಕೊಂಡಿರಿ?, ಅದನ್ನು ಪಡೆದ ಬಳಿಕ ಕೆಳಗಿಟ್ಟಿದ್ದೀರಿ. ಹೀಗಾಗಿ, ನಿಮ್ಮ ಬೆರಳಚ್ಚನ್ನೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಕೋರ್ಟ್ ಅಧಿಕಾರಿ ಯಾವುದೇ ದಾಖಲೆಯನ್ನು ಸ್ವೀಕರಿಸುವಂತಿಲ್ಲ. ವಕೀಲರು ಕಡತ ನೀಡಿದ್ದರೆ ನೋಡಬಹುದಿತ್ತು. ಆದರೆ, ಅದನ್ನು ವ್ಯಕ್ತಿಯೊಬ್ಬರು ನೀಡಿದ್ದಾರೆ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕೈ ಕೊಯ್ದುಕೊಂಡ ವ್ಯಕ್ತಿಯನ್ನು ಮೈಸೂರು ಮೂಲದ ಶ್ರೀನಿವಾಸ್ (51) ಎಂದು ಗುರುತಿಸಲಾಗಿದೆ. ಸದ್ಯ ಗಾಯಾಳುವನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬರಬೇಕಿದೆ.