ಬೆಂಗಳೂರು : ಚಿನ್ನಾಭರಣ ದೋಚಿದ್ದ ಮನೆ ಕೆಲಸದ ಮಹಿಳೆಯ ಬಂಧನ
ಬೆಂಗಳೂರು: ಮಾಲಕನ ಮನೆಯಲ್ಲಿ ಚಿನ್ನಾಭರಣ ದೋಚಿ ರಾಬರಿ ಕಥೆ ಕಟ್ಟಿದ್ದ ಮನೆ ಕೆಲಸದ ಮಹಿಳೆಯನ್ನು ಬಂಧಿಸಿರುವ ಸದಾಶಿವನಗರ ಠಾಣೆ ಪೊಲೀಸರು, 30 ಲಕ್ಷ ರೂ.ಮೌಲ್ಯದ 523 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಬಳ್ಳಾರಿ ಮೂಲದ 34 ವರ್ಷದ ಶಾಂತಾ ಎಂಬುವರನ್ನು ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಈ ಮಹಿಳೆಯು 3 ವರ್ಷಗಳಿಂದ ಮಾರುತಿ ಪ್ರಸನ್ನ ಎಂಬುವರ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಗಂಡ ಮೃತಪಟ್ಟಿದ್ದ. ಮಾಲಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಇರುವುದನ್ನು ಖಾತ್ರಿಪಡಿಸಿಕೊಂಡಿದ್ದಳು.
ಇದೇ ವೇಳೆ, ಮಾಲಕರ ಕುಟುಂಬ ವಿದೇಶಕ್ಕೆ ತೆರಳಿತ್ತು. ಈ ಸಮಯವನ್ನು ಅರಿತು ಪೂರ್ವ ಸಂಚಿನಂತೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ವೈರ್ ಕಟ್ ಮಾಡಿ, ದರೋಡೆ ಮಾಡಲು ಬೇಕಾಗಿದ್ದ ಗ್ಯಾಸ್ ಲೈಟ್, ಸುತ್ತಿಗೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಿದ್ದಳು. ಕಬೋರ್ಡ್‍ನಲ್ಲಿ ಬೀಗದ ಕೀಯನ್ನು ಗ್ಯಾಸ್ ಲೈಟ್ ಮೂಲಕ ಸುಟ್ಟು ಅಪರಿಚಿತರೇ ಮನೆಗೆ ನುಗ್ಗಿ ದರೋಡೆ ಮಾಡಿರುವ ಹಾಗೇ ಸೀನ್ ಕ್ರಿಯೇಟ್ ಮಾಡಿದ್ದಳು. ಜ.25ರ ರಾತ್ರಿ ಅಪರಿಚಿತರು ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದಾರೆಂದು ಮನೆ ಮಾಲಕರನ್ನು ನಂಬಿಸಿದ್ದಳು.
ಇದರಂತೆ ಮಾಲಕರು ದೂರು ನೀಡಿದ ಮೇರೆಗೆ ಇನ್‍ಸ್ಪೆಕ್ಟರ್ ಗಿರೀಶ್ ನೇತೃತ್ವದ ತಂಡ ತನಿಖೆ ನಡೆಸಿದಾಗ ಅಪರಿಚಿತರು ಮನೆಗೆ ಬಂದು ರಾಬರಿ ಮಾಡದಿರುವುದನ್ನು ಖಚಿತಪಡಿಸಿಕೊಂಡಿದ್ದರು. ಬಳಿಕ ಮನೆ ಕೆಲಸದಾಕೆಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.