ಬೆಂಗಳೂರು: ಪಟಾಕಿ ಸಿಡಿದು 60 ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಗಾಯ
ಬೆಂಗಳೂರು, ನ.15: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಪಟಾಕಿ ಸಿಡಿತದಿಂದ 60 ಕ್ಕೂ ಹೆಚ್ಚು ಮಂದಿಯ ಕಣ್ಣುಗಳಿಗೆ ಹಾನಿಯಾಗಿವೆ. ಇದರ ಜೊತೆಗೆ 50 ಮಂದಿಯ ಮೈಕೈಗಳಿಗೆ ಸುಟ್ಟ ಗಾಯಗಳಾಗಿವೆ. ಜನರ ಬಾಳಲ್ಲಿ ಬೆಳಕಾಗಬೇಕಾಗಿದ್ದ ದೀಪಾವಳಿಯ ಸಂಭ್ರಮದಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡಿರುವ ಕೆಲವರ ಬಾಳನ್ನ ಕತ್ತಲಾಗಿಸುತ್ತಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿಯಲ್ಲಿ ಪಟಾಕಿ ಅವಗಢಗಳು ಸಂಭವಿಸಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ನ.12ರಿಂದ ಪ್ರಾರಂಭವಾಗಿರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ 60 ಕ್ಕೂ ಹೆಚ್ಚು ಪಟಾಕಿ ಸಂಬಂಧಿತ ಗಾಯಗಳ ಪ್ರಕರಣಗಳು ವರದಿಯಾಗಿವೆ.
ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರಿಗೆ ಗಂಭೀರವಾದ ಗಾಯಗಳಾಗಿವೆ. ಅವರ ಒಂದು ಕಣ್ಣಿನ ದೃಷ್ಟಿ ಹಾಳಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಶ್ರೀರಾಂಪುರದಲ್ಲಿ 18 ವರ್ಷದ ಯುವಕ ನ.13ರಂದು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು ಆತನ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಧರ್ಮಾವರಂನ 10 ವರ್ಷದ ಬಾಲಕಿ ಮತ್ತು ನಗರದ 22 ವರ್ಷದ ಯುವಕನಿಗೂ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಇದರಿಂದಾಗಿ ಅವರಿಗೆ ದೃಷ್ಟಿ ಸಮಸ್ಯೆ ಎದುರಾಗಿದೆ.
ಮೈಕೈಗೆ ಸುಟ್ಟಗಾಯಗೊಂಡವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಗಂಭೀರವಾದ ಗಾಯಗೊಂಡವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸರಕಾರದ ಸೂಚನೆಯ ಹಿನ್ನೆಲೆಯಲ್ಲಿ ಜನರು ಪಟಾಕಿ ಮಳಿಗೆಗಳಲ್ಲಿ ಹಸಿರು ಪಟಾಕಿ ಕುರಿತು ವಿಚಾರಿಸಿದ್ದಾರೆ. ಆದರೆ, ಸರಕಾರದ ಸೂಚನೆಯಂತೆ ಎನ್‍ಇಇಆರ್‍ಐ ಲೋಗೋ ಮತ್ತು ಕ್ಯೂ ಆರ್ ಕೋಡ್ ಇರುವ ನೈಜ ಹಸಿರು ಪಟಾಕಿ ಮಾರುಕಟ್ಟೆಯಲ್ಲಿ ಕಾಣಿಸಿಲ್ಲ. ಹೀಗಾಗಿ, ದೊರೆತ ಪಟಾಕಿಗಳೆಲ್ಲವನ್ನು ಸಿಡಿಸಿದ್ದಾರೆ.