ಬೆಂಗಳೂರು: ಪಾರ್ಕ್‍ಗಳಲ್ಲಿ ರಾತ್ರಿ 10 ಗಂಟೆವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ವ್ಯಾಪ್ತಿಯಲ್ಲಿರುವ ಎಲ್ಲ ಪಾರ್ಕ್‍ಗಳಲ್ಲಿ ಬೆಳಗ್ಗೆ 5ರಿಂದ ರಾತ್ರಿ 10ರವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಗರೀಕರ ಆರೋಗ್ಯ ದೃಷ್ಟಿಯಿಂದ ಪಾರ್ಕ್‍ಗಳ ಭೇಟಿ ಅವಧಿ ಹೆಚ್ವಿಸಲಾಗಿದ್ದು, ಅಗತ್ಯ ಮೂಲಸೌಲಭ್ಯ ಹಾಗೂ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 1200ಕ್ಕೂ ಹೆಚ್ಚು ಉದ್ಯಾನವನಗಳಿವೆ. ಪ್ರಾಯಶಃ ದೇಶದಲ್ಲೇ ಅತಿ ಹೆಚ್ಚು ಅಂದರೆ ಪ್ರತಿಯೊಂದು ವಾರ್ಡ್‍ನಲ್ಲಿ ಉದ್ಯಾನವನವಿದೆ. ಸಾರ್ವಜನಿಕರು ಕಾಲ್ನಡಿಗೆ, ವ್ಯಾಯಾಮ ಹಾಗೂ ಸಾಮಾಜಿಕವಾಗಿ ಮತ್ತು ಮುಖ್ಯವಾಗಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಹೊರಗಿನ ಪರಿಸರದಲ್ಲಿ ಕೆಲಸ ಮಾಡುವ ಕಾರ್ಮಿಕರ ವಿಶ್ರಾಂತಿಗಾಗಿ ಉದ್ಯಾನವನಗಳು ಪ್ರಯೋಜನಕಾರಿಯಾಗಿವೆ ಎಂದರು.
ಉದ್ಯಾನವನಗಳು ನಮ್ಮ ನಗರದಲ್ಲಿ ಅತ್ಯಮೂಲ್ಯ ಮತ್ತು ಅಗತ್ಯವಿರುವ ಹಸಿರು ಸ್ಥಳಗಳಾಗಿರುವುದರಿಂದ ಅವುಗಳನ್ನು ದಿನವಿಡೀ ತೆರೆದಿಡಲು ಸಾರ್ವಜನಿಕರಿಂದ ಸಾಕಷ್ಟು ಬೇಡಿಕೆ ಇದೆ. ನಮ್ಮದು ಸಾರ್ವಜನಿಕರ ಮಾತನ್ನು ಆಲಿಸುವ ಹಾಗೂ ಸ್ಪಂದಿಸುವ ಸರಕಾರವಾಗಿದ್ದು, ಅದರಂತೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪಾರ್ಕ್‍ಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ವಿವರಿಸಿದರು.
ಇನ್ನೂ, ಉದ್ಯಾನವನಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಪೊಲೀಸರ ಗಸ್ತು, ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು. ಇದರ ಜತೆಗೆ 22660000, 22221188 ಪಾಲಿಕೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. 9480685700 ಗೆ ವಾಟ್ಸಪ್ ಮೂಲಕ ಮಾಹಿತಿ ನೀಡಬಹುದು ಎಂದು ಅವರು ಹೇಳಿದರು.