‘ಭಾಗವತ್ ಹೇಳಿಕೆ’ ರಾಷ್ಟ್ರೀಯ ನೀತಿಯ ಆಶಯಕ್ಕೆ ವಿರುದ್ಧ: ಡಾ.ಎಚ್.ಸಿ.ಮಹದೇವಪ್ಪ

Update: 2024-12-02 13:10 GMT

ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು : ‘ಕುಟುಂಬ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರಕಾರಗಳು ನಿರಂತರ ಪ್ರಯತ್ನ ಮಾಡುತ್ತಿದ್ದು, ಇದು ರಾಷ್ಟ್ರೀಯ ನೀತಿಯ ಆಶಯವೂ ಆಗಿದೆ. ಹೀಗಿರುವಾಗ ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ‘ಸಮುದಾಯಗಳ ಉಳಿವಿಗಾಗಿ ಪ್ರತಿ ದಂಪತಿಯು ಕನಿಷ್ಠ 3 ಮಕ್ಕಳನ್ನು ಹೆರಬೇಕು’ ಎಂದು ಹೇಳಿಕೆ ನೀಡಿರುವುದು ರಾಷ್ಟ್ರೀಯ ನೀತಿಗೆ ವಿರುದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ಷೇಪಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸವಾಲುಗಳನ್ನು ನಿಭಾಯಿಸಲು ಉನ್ನತ ಅಧಿಕಾರ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದರು. ಇನ್ನು ದೇಶವೊಂದರ ಸುಸ್ಥಿರ ಅಭಿವೃದ್ಧಿಗೆ ಜನಸಂಖ್ಯಾ ಸ್ಪೋಟವು ಸದಾ ಮಾರಕ ಎಂಬುದನ್ನು ಹಲವು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ’ ಎಂದು ಉಲ್ಲೇಖಿಸಿದ್ದಾರೆ.

‘ಈ ಸದ್ಯ ಭಾರತದ ಜನಸಂಖ್ಯಾ ಸ್ಫೋಟ ಮತ್ತು ಅದರಿಂದ ಜನರಿಗೆ ದೊರಕುತ್ತಿರುವ ಬದುಕಿನ ಅವಕಾಶಗಳು ಮತ್ತು ಸೌಲಭ್ಯವನ್ನು ಗಮನಿಸಿದರೆ ನಮ್ಮಲ್ಲಿ ಜನಸಂಖ್ಯಾ ನಿಯಂತ್ರಣ ಮಾಡುವುದು ಅಗತ್ಯವಾಗಿದೆ. ದೇಶದ ಜನರು ಸಮಾನವಾದ ಘನತೆಯಿಂದ ಬದುಕಲು ಜನಸಂಖ್ಯಾ ಸ್ಫೋಟವೇ ಅಡ್ಡಿಯಾಗಿರುವಾಗ ಭಾಗವತ್ ಜವಾಬ್ದಾರಿಯನ್ನು ಅರಿತು ಮಾತನಾಡಬೇಕು. ಜನಸಂಖ್ಯಾ ಸ್ಫೋಟದ ಈ ಸಂದರ್ಭದಲ್ಲಿ ಯಾರೇ ಈ ರೀತಿಯಾಗಿ ಹೇಳಿಕೆಗಳನ್ನು ನೀಡಿದರೂ ನಾನು ಖಂಡಿಸುತ್ತೇನೆ’ ಎಂದು ಮಹದೇವಪ್ಪ ಟೀಕಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News