ಟೆರಿಟೋರಿಯಲ್ ಆರ್ಮಿಗೆ ನಿಯೋಜನೆಗೊಂಡ ಭವ್ಯಾ ನರಸಿಂಹಮೂರ್ತಿ

Update: 2024-06-02 13:57 GMT

Photo : x/@Bhavyanmurthy

ಬೆಂಗಳೂರು : ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿ(ಪ್ರಾದೇಶಿಕ ಸೇನೆ)ಯಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಕಮಿಷನ್ಡ್ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

ರವಿವಾರ ಈ ಕುರಿತು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ನಾನು ಭಾರತೀಯ ಸೇನೆಯ ಭಾಗವಾಗುತ್ತಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. ಟೆರಿಟೋರಿಯಲ್ ಆರ್ಮಿಯಲ್ಲಿ ದಕ್ಷಿಣ ಭಾರತದಿಂದ ಕಮಿಷನ್ಡ್ ಆಫೀಸರ್ ಆದ ಏಕೈಕ ಮಹಿಳೆ ನಾನಾಗಿದ್ದೇನೆ. ಡಿಜಿಟಿಎ 2022ರಲ್ಲಿ ನಡೆಸಿದ ಟಿಎ ಪರೀಕ್ಷೆಯಲ್ಲಿ ಪಾಸಾದ ಏಕೈಕ ಮಹಿಳೆ ನಾನಾಗಿದ್ದೇನೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಇನ್ನು ಮುಂದೆ ನಾನು ದೇಶದೊಳಗೆ ರಾಜಕಾರಣಿಯಾಗಿ ನನ್ನ ಜನರ ಸೇವೆ ಮಾಡುವುದರ ಜತೆಗೆ ಭಾರತೀಯ ಸೇನಾಧಿಕಾರಿಯಾಗಿ ನನ್ನ ದೇಶ ಕರೆದಾಗ ಗಡಿಯಲ್ಲಿ ದೇಶದ ರಕ್ಷಣೆ ಮಾಡಲೂ ಸಹ ಸಿದ್ಧಳಿದ್ದೇನೆ’ ಎಂದು ಭವ್ಯಾ ತಿಳಿಸಿದ್ದಾರೆ.

ಪ್ರಾದೇಶಿಕ ಸೇನೆ ಎಂಬುದಾಗಿ ಹೇಳುವ ಈ ಟೆರಿಟೋರಿಯಲ್ ಆರ್ಮಿಯಲ್ಲಿ ಎರಡು ವಿಭಾಗಗಳಿವೆ. ಒಂದು, ಡಿಪಾರ್ಟಮೆಂಟಲ್ ಹಾಗೂ ಎರಡನೇಯದ್ದು ನಾನ್ ಡಿಪಾರ್ಟಮೆಂಟಲ್. ಡಿಪಾರ್ಟಮೆಂಟಲ್‍ನಲ್ಲಿ ಭಾರತೀಯ ನಾಗರಿಕ ಸೇವಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈಲ್ವೆಯ ನಿವೃತ್ತರು ಸೇರಿಕೊಳ್ಳಬಹುದು. ನಾನ್ ಡಿಪಾರ್ಟಮೆಂಟಲ್‍ನಲ್ಲಿ ಯಾವುದೇ ಭಾರತೀಯ ನಾಗರಿಕರು ಸೇರಿಕೊಳ್ಳಬಹುದು.

ಕಾಂಗ್ರೆಸ್‍ನ ವಕ್ತಾರೆಯಾಗಿ ಜನರಿಗೆ ಪರಿಚಯವಾಗಿದ್ದ ಭವ್ಯಾ ನರಸಿಂಹಮೂರ್ತಿ ಅವರು ಈಗ ನಾನ್ ಡಿಪಾರ್ಟಮೆಂಟಲ್ ವಿಭಾಗದಿಂದ ಕಮಿಷನ್ಡ್ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

ಪ್ರಾದೇಶಿಕ ಸೇನೆಗೆ ಸೇರುವವರು ಭಾರತೀಯ ಸೇನೆಗೆ ಅಗತ್ಯ ಬಿದ್ದಾಗ ಸ್ವಯಂಸೇವಕರ ರೀತಿ ಕೆಲಸ ಮಾಡಬೇಕಾಗುತ್ತದೆ. ಇದರಲ್ಲೂ ಸಹ ಕಮಿಷನ್ಡ್ ಹಾಗೂ ನಾನ್ ಕಮಿಷನ್ಡ್ ಎಂಬ ಎರಡು ಹಂತಗಳಿದ್ದು, ಕಮಿಷನ್ಡ್ ಹುದ್ದೆಗಳು ಅಧಿಕಾರಿ ಹಂತದ ಹುದ್ದೆಗಳದ್ದಾಗಿದ್ದರೆ, ನಾನ್ ಕಮಿಷನ್ಡ್ ಇತರ ಸೇವಾ ಸಿಬ್ಬಂದಿ ಹಂತದ ಹುದ್ದೆಗಳಾಗಿರುತ್ತವೆ.

ಈಗಾಗಲೇ ಪ್ರಾದೇಶಿಕ ಸೇನೆಯಲ್ಲಿ ಕ್ರಿಕೆಟಿಗ ಎಂ.ಎಸ್.ಧೋನಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಕರ್ನಾಟಕದ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಸೇರಿ ಹಲವರು ಸದಸ್ಯರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News