ನಗರತ್ ಪೇಟೆ ಗಲಾಟೆಗೆ ಬಿಜೆಪಿ ಕೋಮು ಬಣ್ಣ ಹಚ್ಚುತ್ತಿದೆ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ನಗರತ್ ಪೇಟೆ ಗಲಾಟೆ ವಿಚಾರವನ್ನು ಬಿಜೆಪಿಯವರು ಸ್ವಾರ್ಥಕ್ಕೋಸ್ಕರ ಕೋಮು ಬಣ್ಣ ಕೊಟ್ಟು ವಿಷಯ ಹರಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮಾನ್ ಚಾಲೀಸಾ, ಆಝಾನ್ ಬಗ್ಗೆ ದೂರಿನಲ್ಲಿ ಎಲ್ಲಿ ಕೂಡ ಪ್ರಸ್ತಾಪವಿಲ್ಲ. ಗಲಾಟೆ ಮಾಡಿದವರು ತಪ್ಪು ಮಾಡಿದ್ದಾರೆ, ಬೆದರಿಕೆ ಹಾಕಿದ್ದು ತಪ್ಪು. ಆದರೆ, ಇದಕ್ಕೆ ಕೋಮುದ್ವೇಷದ ಬಣ್ಣ ಕೊಟ್ಟು ವಿಷಯ ಹರಡಲಾಗುತ್ತಿದೆ. ಎಫ್‍ಐಆರ್ ನಲ್ಲೂ ಎಲ್ಲೂ ಹನುಮಾನ ಚಾಲೀಸಾ ಮತ್ತು ಆಝಾನ್ ಬಗ್ಗೆ ಉಲ್ಲೇಖವಿಲ್ಲ ಎಂದರು.
ಸಂಸದ ತೇಜಸ್ವಿ ಸೂರ್ಯ ದ್ವೇಷದ ವಾತಾವರಣ ಸೃಷ್ಟಿಸಲು ಈ ರೀತಿ ಮಾಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದುಕೊಳ್ಳಲಿ. ಅನಾವಶ್ಯಕವಾಗಿ ಭಯ ಹುಟ್ಟಿಸಲಾಗುತ್ತಿದೆ. ಚುನಾವಣೆ ಇದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಅಂತ ಬಿಂಬಿಸುತ್ತಿದ್ದಾರೆ. ಇವರೇ ಸೃಷ್ಟಿ ಮಾಡಿ ಭಯ ಮೂಡಿಸುತ್ತಿದ್ದಾರೆ. ಕ್ಷುಲ್ಲಕ ಕೀಳುಮಟ್ಟದ ಯೋಚನೆ ಬಿಜೆಪಿಯವರದ್ದು ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.