ಬಿಜೆಪಿ, ಜೆಡಿಎಸ್ ಮೈತ್ರಿಯನ್ನು ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಸೋಲಿಸಬೇಕು : ದಸಂಸ ಐಕ್ಯ ಹೋರಾಟ ಚಾಲನ ಸಮಿತಿ

Update: 2024-04-08 16:00 GMT

ಬೆಂಗಳೂರು: ಶೋಷಿತ ಸಮುದಾಯಗಳ ಮೇಲೆ ದಮನಕಾರಿ ನೀತಿ ಅನುಸರಿಸುತ್ತಿರುವ, ಬಿಜೆಪಿ, ಜೆಡಿಎಸ್ ಮೈತ್ರಿಯನ್ನು ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನ ಸಮಿತಿ ಕರೆ ನೀಡಿದೆ.

ಸೊಮವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಚಾಲಕ ಮಾವಳ್ಳಿ ಶಂಕರ್, ಭ್ರಷ್ಟಾಚಾರದ ವಿರುದ್ಧ ಭಾರತ ಎಂದು ಘೋಷಿಸಿದ್ದ ಪ್ರಧಾನಿ ಮೋದಿ ನಾನು ತಿನ್ನುವುದಿಲ್ಲ. ತಿನ್ನುವವರಿಗೆ ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ಚುನಾವಣಾ ಬಾಂಡ್ ಹೆಸರಿನಲ್ಲಿ ಭ್ರಷ್ಟಾಚಾರವನ್ನು ಕಾನೂನು ರೂಪಗೊಳಿಸಿ ಬಿಜೆಪಿ ದೊಡ್ಡ ಹಗರಣ ಮಾಡಿದೆ. 10 ವರ್ಷಗಳ ಮೋದಿ ಆಡಳಿತದಲ್ಲಿ ದೇಶದ ಅಭಿವೃದ್ಧಿಯಾಗಿಲ್ಲ. ಕೇವಲ ಸುಳ್ಳು ಹೇಳುವುದರಲ್ಲೇ ಕಾಲ ಕಳೆದಿದ್ದಾರೆ ಎಂದು ಆರೋಪಿಸಿದರು.

ಶ್ರೀಮಂತವಾಗಿದ್ದ ರಾಜ್ಯದ ವಿಜಯಾ ಬ್ಯಾಂಕ್‍ನ್ನು ಗುಜರಾತ್‍ನ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಿ ಬ್ಯಾಂಕ್ ರಾಷ್ಟ್ರೀಕರಣವನ್ನು ಮೂಲೆಗುಂಪು ಮಾಡಿದರು. ಸಂವಿಧಾನದ ಆಶಯಗಳಾದ ಸಮಾಜವಾದಿ, ಜಾತ್ಯಾತೀತ ನಿಲುವುಗಳ ಆಧಾರದಲ್ಲೆ ದೇಶ ಮುನ್ನಡೆಯಬೇಕು. ಆದರೆ ಬಿಜೆಪಿ ಅದರ ವಿರುದ್ಧ ನಡೆಯುತ್ತಿದೆ. ಗೋಲ್ವಾಲ್ಕರ್ ಚಿಂತನೆಯಾದ ದೇಶದಲ್ಲಿ ಅರಾಕತೆ ಇರಬೇಕು. ಬಡವರು ಬಡವರಾಗಿಯೇ ಇರಬೇಕು ಎನ್ನುವುದನ್ನು ಬಿಜೆಪಿ ಮುಂದುವರಿಸುತ್ತಿದೆ. ಅದಕ್ಕಾಗಿ ಯುವಜನರು ದೇಶದ ಅಭಿವೃದ್ಧಿಯ ಚರಿತ್ರೆಯನ್ನು ಅರಿತುಕೊಂಡು ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಹೋರಾಟಗಾರ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ದೇಶದಲ್ಲಿ 10ವರ್ಷಗಳಿಂದ ಫ್ಯಾಸಿಸ್ಟ್ ಸರಕಾರ ನಡೆಯುತ್ತಿದೆ. ಅದರಲ್ಲಿ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳು ಸೇರಿಕೊಂಡಿದ್ದು, ಭ್ರಮೆಯಲ್ಲಿ ಭಾರತವನ್ನು ನಡೆಸಲಾಗುತ್ತಿದೆ. ಮೋದಿ ಅವರು 10ವರ್ಷದಿಂದ ಆಡಳಿತ ನಡೆಸಿದ್ದಾರೆ. ಆದರೆ ಈಗ ಮುಂದಿನ 5ವರ್ಷದ ನೀಲನಕ್ಷೆ ತಯಾರಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ 10ವರ್ಷದ ಅಭಿವೃದ್ಧಿ ಏನು? ಎಂದು ಪ್ರಶ್ನಿಸಿದರು.

ಭಾರತ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಲೋಕಸಭೆ ಚುನಾವಣೆ ಕೊನೆಯ ಅವಕಾಶವಾಗಿದೆ. ಮತ್ತೆ ಬಿಜೆಪಿ ಗೆದ್ದರೆ ಆರೆಸ್ಸೆಸ್ 100 ವರ್ಷದ ದಾವಂತದಲ್ಲಿರುವುದರಿಂದ ಹಿಂದುತ್ವ ರಾಷ್ಟ್ರ ಘೋಷಿಸುವ ಸಂಚು ರೂಪಿಸಲಾಗುತ್ತದೆ. ಅದಕ್ಕಾಗಿ ಭಾರತವನ್ನು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ರಾಜಕೀಯ ಜನಜಾಗೃತಿಗಾಗಿ ದಸಂಸ ಆಂದೋಲನದ ಕರಪತ್ರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಎಂ.ಸೋಮಶೇಖರ್, ಜೀವನಹಳ್ಳಿ ಆರ್.ವೆಂಕಟೇಶ್, ಎನ್.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ʼಭಾರತ ಹಿಮ್ಮುಖ ಚಲನೆಯಲ್ಲಿದೆ. ಎಲ್ಲ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಕೆಲಸ ಮಾಡಬೇಕು. ಆದರೆ ಮೋದಿ ಅಧಿಕಾರದಲ್ಲಿ ವ್ಯತಿರಿಕ್ತವಾಗಿದೆ. ಸಮುದಾಯಗಳ ನಡುವೆ ಕಂದಕ ಸೃಷ್ಠಿ, ಬೆಲೆ ಏರಿಕೆ, ತೆರಿಗೆ ಹೆಸರಲ್ಲಿ ಸುಲಿಗೆ, ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಆದರೆ ಬಂಡವಾಳಶಾಹಿಗಳ ಬೆಳವಣಿಗೆಯಾಗಿದೆ. ಸಂವಿಧಾನವನ್ನು ನಾಶ ಮಾಡುವ ಕೆಲಸ ನಡೆಯುತ್ತಿದೆ. ಸಂವಿಧಾನ ನಾಶವಾದರೆ ದೇಶ ಉಳಿಯುವುದಿಲ್ಲ. ಬಿಜೆಪಿಯು ದೇಶದ ಸೌಹಾರ್ದವನ್ನು ನಾಶ ಮಾಡಿ, ವೈದಿಕ ಸಾಮ್ರಾಜ್ಯ ಸ್ಥಾಪಿಸುವ ಹುನ್ನಾರ ಮಾಡುತ್ತಿದೆ. ಅದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ‘ಇಂಡಿಯಾ’ ಒಕ್ಕೂಟವನ್ನು ಗೆಲ್ಲಿಸಬೇಕಾಗಿದೆ’

ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತ


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News