ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಿ: ನಟ ಧನಂಜಯ್

Update: 2024-05-31 16:36 GMT

ಬೆಂಗಳೂರು: ‘ರಾಜ್ಯ ಸರಕಾರವು ಎಲ್ಲ ರಂಗಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯತೆಯನ್ನು ನೀಡಬೇಕು’ ಎಂದು ಚಲನಚಿತ್ರ ನಟ ಧನಂಜಯ್ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದಲ್ಲಿರುವ ತಮ್ಮ ನಿವಾಸವಾದ ‘ದಿ ಪ್ರೊಮೊಂಟ್ ಟಾಟಾ ಹೌಸಿಂಗ್’ನಲ್ಲಿ ಒಂದೆಡೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕ್ಕೈ ಪದ್ಮಶಾಲಿ ಬರೆದಿರುವ ಅಕ್ಕಯ್-ಕರುಣೆಗೊಂದು ಸವಾಲು ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಅಕ್ಕೈ ಪದ್ಮಶಾಲಿಯವರ ಅಕ್ಕಯ್-ಕರುಣೆಗೊಂದು ಸವಾಲು ಕೃತಿಯನ್ನು ಬಿಡುಗಡೆ ಮಾಡಲು ನನಗೆ ಬಹಳ ಸಂತೋಷವಾಗುತ್ತಿದೆ. ಅವರ ಬದುಕಿನ ಹೋರಾಟ ಹಾಗೂ ಸಮುದಾಯದ ನಿರಂತರ ಸವಾಲುಗಳು, ಕಷ್ಟಗಳ ವಿರುದ್ಧವಾಗಿ ಸಂಘಟಿತರಾಗಿರುದನ್ನು ಪುಸ್ತಕ ಹೇಳುತ್ತದೆ. ಈ ಪುಸ್ತಕವನ್ನು ಮತ್ತಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ತಲುಪಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ಅಕ್ಕೈ ಪದ್ಮಶಾಲಿ ಅವರು ದೇಶದ ಆಸ್ತಿಯಾಗಿದ್ದು, ಎಷ್ಟು ನೊಂದ ಜೀವಿಗಳಿಗೆ ಅವರು ಮಾರ್ಗದರ್ಶಕರು ಹಾಗೂ ಸ್ಪೂರ್ತಿಯಾಗಿದ್ದಾರೆ. ಮತ್ತಷ್ಟು ಕೆಲಸ ಕಾರ್ಯಗಳನ್ನು ಈ ಪುಸ್ತಕದ ಮೂಲಕ ಮಾಡಲೆಂದು ನಾವು ಬಯಸುತ್ತೇವೆ ಎಂದರು.

ಅಕ್ಕೈ ಪದ್ಮಶಾಲಿ ಮಾಡುವ ಯಾವುದೇ ಸಾಮಾಜಿಕ ಕಾರ್ಯಗಳಿಗೆ ನಮ್ಮ ಸಂಪೂರ್ಣವಾದ ಬೆಂಬಲವನ್ನು ನೀಡಲು ನಾವು ಎರಡು ಬಾರಿ ಯೋಚಿಸುವುದಿಲ್ಲ. ಅತಿ ಶೀಘ್ರದಲ್ಲಿ ಅವರಿಗೆ ಸರಕಾರದಲ್ಲಿ ಅತ್ಯುನ್ನತ ಸ್ಥಾನ ಸಿಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಕ್ಕಯ್-ಕರುಣೆಗೊಂದು ಸವಾಲು ಕೃತಿಯ ಜೊತೆಗೆ ಒಂದೆಡೆ ಸಂಸ್ಥೆ ವತಿಯಿಂದ ಹೊರತಂದ ಅಟೆಂಷನ್ ಪ್ಲೀಸ್, ಮೈ ಮನ, ಭರವಸೆ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಲೇಖಕರಾದ ಮಾಳವಿಕ, ಅಬೀದಾ ಬೆಗಮ್, ರಕ್ಷಿತಾ, ಸಂಚಾಲಾಕಿ ಮಾಯಾ, ಪ್ರಕಾಶಿ, ಮೋನಿಕಾ ಇದ್ದರು.


 



Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News