ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸದ ಉದ್ದಿಮೆಗಳಿಗೆ ಬೀಗಮುದ್ರೆ: ಬಿಬಿಎಂಪಿ ಎಚ್ಚರಿಕೆ

Update: 2024-02-28 15:55 GMT

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸದೆ ಇರುವ ವಾಣಿಜ್ಯ ಉದ್ದಿಮೆಗಳಿಗೆ ಬೀಗಮುದ್ರೆ ಹಾಕಲಾಗುವುದು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಸುತ್ತೋಲೆ ಹೊರಡಿಸಿದ್ದಾರೆ.

ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ಗಳು ಮುಂತಾದವುಗಳು ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಪ್ರದರ್ಶಿಸಲಾಗಿದೆ ಮತ್ತು ಕನ್ನಡ ಭಾಷೆಯು ನಾಮಫಲಕದ ಮೇಲ್ಬಾಗದಲ್ಲಿ ಪ್ರದರ್ಶಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ವಿಶೇಷ ರಾಜ್ಯ ಪತ್ರಿಕೆ ಅಧಿಸೂಚನಾ ಪತ್ರ ಹೊರಡಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಫೆ.28ರೊಳಗಡೆ ಸುಮಾರು 55,187 ವಾಣಿಜ್ಯ ಮಳಿಗೆ/ಉದ್ದಿಮೆಗಳಿಗೆ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿಕೊಳ್ಳಲು ನೋಟಿಸ್ ಜಾರಿ ಮಾಡಲಾಗಿತ್ತು. ಅದರಂತೆ 52,134 ವಾಣಿಜ್ಯ ಉದ್ದಿಮೆಗಳು ತಮ್ಮ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ.

ಫೆ.29ರಿಂದ ಅನ್ವಯವಾಗುವಂತೆ, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗೆ ಉದ್ದಿಮೆ ಪರವಾನಿಗಿ ಅಮಾನತ್ತು ಮಾಡಿ, ವಾಣಿಜ್ಯ ಉದ್ದಿಮೆಗಳನ್ನು ಬೀಗಮುದ್ರೆ ಮಾಡಲು ಆರೋಗ್ಯ ಇಲಾಖಾ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News