ಕಾರಂತ ಬಡಾವಣೆ: ಅಧಿಸೂಚನೆ ಹೊರಡಿಸದಂತೆ ಹೈಕೋರ್ಟ್ ಆದೇಶ

Update: 2024-01-19 14:41 GMT

ಬೆಂಗಳೂರು: ಡಾ.ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಕೋರ್ಟ್ ಅನುಮತಿ ಇಲ್ಲದೆ ಅಧಿಸೂಚನೆ ಹೊರಡಿಸಬಾರದು ಎಂದು ರಾಜ್ಯ ಸರಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಹೈಕೋರ್ಟ್ ಆದೇಶಿಸಿದೆ. ಬಡಾವಣೆ ನಿರ್ಮಾಣದ ಕುರಿತಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆಯೂ ತಾಕೀತು ಮಾಡಿದೆ.

ಶಿವರಾಮ ಕಾರಂತ ಬಡಾವಣೆಯ ರಚನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸರಕಾರದ ವಿರುದ್ಧ ಬಿಡಿಎ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ದೂರುಗಳು ಬಾಕಿ ಇವೆ. ಹಲವರು ಹಕ್ಕು ಮಂಡಿಸಿದ್ದಾರೆ. ಬಡಾವಣೆ ನಿರ್ಮಾಣ ಕಾಮಗಾರಿ ಮುಂದುವರಿಸಬಹುದು. ಆದರೆ, ಹಂಚಿಕೆ ಮಾಡಿದರೆ ಅರ್ಜಿದಾರರ ಹಕ್ಕುಗಳನ್ನು ಮೊಟಕು ಮಾಡಿದಂತಾಗುತ್ತದೆ. ಹೀಗಾಗಿ, ನಿವೇಶನ ಹಂಚಿಕೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಬಡಾವಣೆಯ ಸಮಸ್ಯೆಗಳನ್ನು ಪರಿಹರಿಸದೇ ಬಿಡಿಎ ವತಿಯಿಂದ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂಬ ಅರ್ಜಿದಾರರ ಆರೋಪಗಳನ್ನು ಮಾನ್ಯ ಮಾಡಿದ ನ್ಯಾಯಪೀಠ, ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸದಂತೆ ನಿರ್ಬಂಧ ವಿಧಿಸಿತು.

ಬೆಂಗಳೂರಿನಲ್ಲಿ 2700ಕ್ಕೂ ಅಧಿಕ ಎಕರೆಯಲ್ಲಿ ಶಿವರಾಮ ಕಾರಂತ ಬಡಾವಣೆ ಬಿಡಿಎ ನಿರ್ಮಿಸುತ್ತಿದೆ. ಅದರಲ್ಲಿ ಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಆ ಕುರಿತು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗಳಲ್ಲಿ ಕಾನೂನು ಹೋರಾಟ ನಡೆದು ಕೊನೆಗೆ ನ್ಯಾಯಾಲಯಗಳು ಭೂ ಸ್ವಾಧೀನವನ್ನು ಎತ್ತಿಹಿಡಿದಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News