ಸಿಇಟಿ ಪರೀಕ್ಷೆ ವಿವಾದ : ಕೆಇಎ ವಿರುದ್ಧ ಎಬಿವಿಪಿ ಪ್ರತಿಭಟನೆ
ಬೆಂಗಳೂರು : ಸಿಇಟಿ ಪರೀಕ್ಷೆಯಲ್ಲಿ ಗೊಂದಲಗಳು ಉಂಟಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರದಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಇಲ್ಲಿನ ಮಲ್ಲೇಶ್ವರಂನಲ್ಲಿರುವ ಕೆಇಎ ಕಚೇರಿ ಮುಂಭಾಗ ಧರಣಿ ನಡೆಸಿತು.
ಪರೀಕ್ಷೆಯಲ್ಲಿ ಪಠ್ಯಕ್ರಮದಿಂದ ಹೊರತಾಗಿರುವ ಪ್ರಶ್ನೆಗಳನ್ನು ಕೇಳಲಾಗಿದ್ದು, ಪೋಷಕ, ವಿದ್ಯಾರ್ಥಿ, ಉಪನ್ಯಾಸಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಡಿರುವ ಪರಿಷೃತ ಪಠ್ಯದಿಂದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸದೆ ವಿಷಯ ತಜ್ಞರಿಗೆ ಹಳೆಯ ಪಠ್ಯ ಕೊಡಲಾಗಿದೆ ಎಂದು ಧರಣಿನಿರತರು ಆರೋಪಿಸಿದರು.
ಭೌತಶಾಸ್ತ್ರ ವಿಷಯದಲ್ಲಿ 10, ಗಣಿತದಲ್ಲಿ 14, ರಸಾಯನಶಾಸ್ತ್ರದಲ್ಲಿ 23 ಮತ್ತು ಜೀವಶಾಸ್ತ್ರದಲ್ಲಿ 12 ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಬಂದಿರುವುದು ವಿದ್ಯಾರ್ಥಿಗಳ ಪಾಲಿಗೆ ಸಮಸ್ಯೆಯನ್ನು ಉಂಟು ಮಾಡಿದೆ. ಪರೀಕ್ಷೆಯನ್ನು ಸರಿಯಾಗಿ ಮತ್ತು ಗಂಭೀರವಾಗಿ ನಡೆಸದ ಪರಿಣಾಮವಾಗಿ ಈ ಸಮಸ್ಯೆ ರಾಜ್ಯದ ಮೂರು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಸಿಡಿದೆದ್ದ ವಿದ್ಯಾರ್ಥಿ ಸಂಘಟನೆಯ ಮುಖಂಡರು, ನೂರಾರು ವಿದ್ಯಾರ್ಥಿಗಳು ರಸ್ತೆಯಲ್ಲೇ ಕುಳಿತು ಪ್ರತಿಭಟನೆಗೆಗೆ ಮುಂದಾದರು. ಆಗ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೊಂಡು ಪೊಲೀಸರು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಕರೆದೊಯ್ದರು. ಅನುಮತಿ ಇಲ್ಲದೇ ಪ್ರತಿಭಟನೆ ಮಾಡಿದ ಕಾರಣ ಪ್ರತಿಭಟನಾಕಾರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದರು.