ಒಂದೇ ವಿಳಾಸದಲ್ಲಿ ಸಚಿವ ಎಂ.ಬಿ.ಪಾಟೀಲ್ ಹಲವು ನಿವೇಶನಗಳನ್ನು ಪಡೆದಿದ್ದಾರೆ : ಛಲವಾದಿ ನಾರಾಯಣಸ್ವಾಮಿ

Update: 2024-09-02 14:32 GMT

ಬೆಂಗಳೂರು : ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಒಂದೇ ವಿಳಾಸದಲ್ಲಿ ಸೋಲಾಪುರ ರಸ್ತೆ, ಕೆಎಚ್‍ಬಿ ಕಾಲನಿ ಎಂದು ನಮೂದಿಸಿ 5-6 ನಿವೇಶನಗಳನ್ನು ಬೇರೆ ಬೇರೆ ಹೆಸರಿನಲ್ಲಿ ಪಡೆದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದೇ ಕುಟುಂಬದ ಸಚಿವರು ಇರುವ ಒಂದು ಟ್ರಸ್ಟಿಗೆ ಬೆಲೆಬಾಳುವ ಪ್ರದೇಶದ 5 ಎಕರೆ ನಿವೇಶನವನ್ನು ಏರೋಸ್ಪೇಸ್ ಉದ್ದೇಶಕ್ಕೆ ಕೊಟ್ಟಿದ್ದಾರೆ. ಅದಲ್ಲದೆ, ಎಂ.ಬಿ.ಪಾಟೀಲರ ಮಗ ಎಂಬ ಅನುಮಾನದ ವ್ಯಕ್ತಿಗೆ 302ನೇ ಡೆಫಡಿಲ್ ಅಪಾರ್ಟ್‍ಮೆಂಟ್‍ನಲ್ಲಿ ಎರಡು ನಿವೇಶನ ಕೊಟ್ಟಿದ್ದಾರೆ ಎಂದು ದೂರಿದರು.

ಬಬಲೇಶ್ವರದಲ್ಲಿ ಎಂ.ಬಿ.ಪಾಟೀಲ್ ಚುನಾವಣೆಗೆ ನಿಂತಿದ್ದರು. ಚುನಾವಣೆ ವೆಚ್ಚಕ್ಕೆ ಬಾಗ್ಮನೆ ಡೆವಲಪರ್ಸ್‍ನಿಂದ 4 ಕೋಟಿ ರೂ. ಸಾಲ ಪಡೆದಿರುವುದಾಗಿ ತಿಳಿಸಿದ್ದರು. ಇದರ ನಿರ್ದೇಶಕರಾಗಿ ರಾಮಕೃಷ್ಣ ಅನುರಾಧಾ, ರಾಜಾ ಬಾಗ್ಮನೆ, ದಂಡಿಗಾನಹಳ್ಳಿ ವೆಂಕಟರಮಣಪ್ಪ ರಾಮಕೃಷ್ಣ ಇದ್ದಾರೆ ಎಂದು ಅವರು ಹೇಳಿದರು.

ಎಸ್‍ಇಝೆಡ್‍ನಲ್ಲಿ ಹೈಟೆಕ್ ಏರೋಸ್ಪೇಸ್ ಪಾರ್ಕಿಗೆ 8 ಎಕರೆ ಜಾಗವನ್ನು ಮೊನ್ನೆ ಮಂಜೂರು ಮಾಡಿದ್ದಾರೆ. ಇದು ಸುಮಾರು 160 ಕೋಟಿ ರೂ.ಮೌಲ್ಯದ್ದು. ಅದನ್ನು ಬಾಗ್ಮನೆ ಡೆವಲಪರ್ಸ್‍ನ ವೈಗೈ ಇನ್ವೆಸ್ಟ್‍ಮೆಂಟ್ಸ್ ನ ನಿರ್ದೇಶಕರಾದ ರಾಜಾ ಬಾಗ್ಮನೆ, ದಂಡಿಗಾನಹಳ್ಳಿ ವೆಂಕಟರಮಣಪ್ಪ ರಾಮಕೃಷ್ಣರಿಗೆ ಮಂಜೂರು ಮಾಡಿದ್ದಾರೆ. ಬಾಗ್ಮನೆಯೂ ಅವರದ್ದೇ, ವೈಗೈಯೂ ಅವರದ್ದೇ ಎಂದು ನಾರಾಯಣಸ್ವಾಮಿ ಆರೋಪಿಸಿದರು.

ರಾಜ್ಯಪಾಲರನ್ನು ಭೇಟಿ ಮಾಡಿ ಸಿಎ ನಿವೇಶನಗಳ ಅಕ್ರಮದ ಕುರಿತು ತನಿಖೆಗೆ ಕೋರಿದ್ದೇವೆ. ಇದರಲ್ಲಿ ಒಬ್ಬರ ವಿಷಯ ಎಂದು ಹೇಳಿಲ್ಲ. ಆದರೂ ಸಚಿವರು ಕುಪಿತರಾಗಿದ್ದಾರೆ. ಹೈದರಾಬಾದ್‍ನವರಿಗೆ 10 ಎಕರೆ ಜಾಗವನ್ನು ಬೆಂಗಳೂರಿನಲ್ಲಿ ಕೊಟ್ಟಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ 71 ಜನ ಹಣ ಕಟ್ಟಿ ನಾಲ್ಕೈದು ವರ್ಷಗಳಿಂದ ಸಿಎ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಇನ್ನೂ 800 ಎಕರೆ ಬ್ಯಾಕ್‍ಲಾಗ್ ಇದ್ದರೂ ಕೊಡುತ್ತಿಲ್ಲ ಎಂದು ಅವರು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎನ್.ಮಹೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News