ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ತಪ್ಪು: ಡಿಸಿಎಂ ಡಿಕೆಶಿ

Update: 2024-12-01 04:06 GMT

ಡಿ.ಕೆ. ಶಿವಕುಮಾರ್ (Photo: X)

ಬೆಂಗಳೂರು: "ಚಂದ್ರಶೇಖರನಾಥ ಸ್ವಾಮೀಜಿ ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಮಾಡಬೇಕು ಎಂದು ಮಾತನಾಡಿದ್ದು ತಪ್ಪು. ಈ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿಯವರ ಮೇಲೆ ಜನತಾ ದಳದವರು ಪ್ರಕರಣ ದಾಖಲಿಸಿದಾಗ ಆರ್. ಅಶೋಕ್ ಎಲ್ಲಿಗೆ ಹೋಗಿದ್ದರು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಡಿ ಕೆ ಶಿವಕುಮಾರ್ ಈ ರೀತಿ ಪ್ರತಿಕ್ರಿಯಿಸಿದರು.

ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್ ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, "ಸ್ವಾಮೀಜಿಯವರು ತಮ್ಮ ಹೇಳಿಕೆ ವಿಚಾರವಾಗಿ ಕ್ಷಮಾಪಣೆ ಕೇಳಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ. ಜಾತಿ, ಧರ್ಮಗಳ ವಿಚಾರಗಳಲ್ಲಿ ಪ್ರವೇಶ ಮಾಡಬಾರದು. ಮತದಾನ ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕ ಹಕ್ಕು. ಇದರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ" ಎಂದರು.

"ಈ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿಯ ಮೇಲೆ ಮಾಜಿ ಸಚಿವ ಚನ್ನಿಗಪ್ಪರಿಂದ ಪ್ರಕರಣ ದಾಖಲಿಸಿ, ಸ್ವಾಮೀಜಿ ಜಾಮೀನು ಪಡೆಯುವ ಸ್ಥಿತಿ ಬಂದಾಗ, ಅವರು ಹತ್ತಾರು ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಗ ಈ ಅಶೋಕ ಎಲ್ಲಿಗೆ ಹೋಗಿದ್ದ? ಬೇರೆಯವರು ಎಲ್ಲಿ ಹೋಗಿದ್ದರು? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ" ಎಂದು ಡಿಕೆಶಿ ಪ್ರಶ್ನಿಸಿದರು.

ಬಾಲಗಂಗಾಧರನಾಥ ಸ್ವಾಮೀಜಿ ತಪ್ಪು ಮಾಡಿರಲಿಲ್ಲ

"ಅಂದು ಬಾಲಗಂಗಾಧರನಾಥ ಸ್ವಾಮೀಜಿ ತಪ್ಪು ಮಾಡಿರಲಿಲ್ಲ. ಆದರೆ, ಅಂದಿನ ಜನತಾದಳ ಸರಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದು ದಾಖಲೆಗಳಲ್ಲಿದೆ. ಇದನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೇಳಿದರು.

ಅಶೋಕ್ ಬೆಂಕಿ ಹಚ್ಚುತ್ತಿದ್ದಾರೆ

"ಆರ್. ಅಶೋಕ್ ಈ ವಿಚಾರದಲ್ಲಿ ಬೆಂಕಿ ಹಚ್ಚಿ, ಬೀಡಿ ಸೇದಲು ತೊಡಗಿದ್ದಾರೆ. ಚಂದ್ರಶೇಖರನಾಥ ಸ್ವಾಮೀಜಿಯವರನ್ನು ಮುಟ್ಟಿದರೆ ಒಕ್ಕಲಿಗ ಸಮಾಜ ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ" ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.

ನಾನು ಒಕ್ಕಲಿಗ ಸಮುದಾಯವನ್ನು ಬಳಸಿಕೊಂಡಿಲ್ಲ

ಡಿ.ಕೆ. ಶಿವಕುಮಾರ್ 'ಅವರಿಗೆ ಬೇಕಾದಾಗ ಒಕ್ಕಲಿಗ ಸಮುದಾಯ ಬಳಸಿಕೊಳ್ಳುತ್ತಾರೆ' ಎನ್ನುವ ಆರ್. ಅಶೋಕ್ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಎಂದಿಗೂ ಸಮುದಾಯವನ್ನು ಬಳಸಿಕೊಂಡಿಲ್ಲ. ನಾನು ಒಕ್ಕಲಿಗನಾಗಿ ಹುಟ್ಟಿದ್ದೇನೆ. ನಾವು ಎಲ್ಲಾ ಜಾತಿ, ಧರ್ಮಗಳಿಗೆ ಗೌರವ ಕೊಡಬೇಕು. ಸಾಂವಿಧಾನಿಕ ದೇಶದಲ್ಲಿ ಒಂದು ಧರ್ಮ, ಜಾತಿಯ ಹಕ್ಕಿನ ಬಗ್ಗೆ ಮಾತನಾಡುವುದು ಸೂಕ್ತವಲ್ಲ" ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News