ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕ ಕಡೆಗಣನೆ ಖಂಡಿಸಿ ಸಂಸತ್‍ನಲ್ಲಿ ಧ್ವನಿ ಎತ್ತಬೇಕು : ಮುಖ್ಯಮಂತ್ರಿ ಚಂದ್ರು

Update: 2024-07-26 16:55 GMT

ಬೆಂಗಳೂರು : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಸರಕಾರದ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಸಂಪೂರ್ಣ ಅನ್ಯಾಯವಾಗಿದ್ದು, ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತಬೇಕು ಎಂದು ಆಮ್ ಆದ್ಮಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿದ ಅವರು, ರಾಜ್ಯದ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಲು ಈ ಬಾರಿಯ ಬಜೆಟ್‍ನಲ್ಲಿ ಮಾನ್ಯತೆ ನೀಡಬಹುದು ಎಂದು ಭಾವಿಸಿದ್ದೆವು. ಮೇಕೆದಾಟು ಸಮಾನಾಂತರ ಅಣೆಕಟ್ಟು, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ, ಏಮ್ಸ್ ಸ್ಥಾಪನೆ, ಪೆರಿಫೆರಲ್ ರಿಂಗ್ ರೋಡ್, ಸಬ್ ಅರ್ಬನ್ ರೈಲ್ವೆ ಸೇರಿದಂತೆ ಅನೇಕ ಪ್ರಮುಖ ಯೋಜನೆಗಳಿಗೆ ಅನುದಾನವನ್ನು ನಿರೀಕ್ಷಿಸಿದ್ದೆವು. ಆದರೆ ಈ ಬಾರಿಯು ಕರ್ನಾಟಕವನ್ನು ಕಡೆಗಣಿಸಿರುವುದು ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ.

ಪ್ರತಿ ಬಾರಿಯ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಚೊಂಬು ಹೊರತುಪಡಿಸಿ ಬೇರೇನು ಸಿಗುತ್ತಿಲ್ಲ. ರಾಜ್ಯದ ಯಾವೊಬ್ಬ ಬಿಜೆಪಿ ಸಂಸದರೂ ಪಾರ್ಲಿಮೆಂಟ್‍ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದ ಉದಾಹರಣೆ ಇದುವರೆಗೆ ಸಿಕ್ಕಿಲ್ಲ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದಕ್ಕೆ ಇಲ್ಲಿನ ಸಂಸದರ ಮೌನವೇ ಪ್ರಮುಖ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಪರವಾಗಿ ಧ್ವನಿಯೆತ್ತಲು ಅಶಕ್ತರಾಗಿದ್ದರೆ ಕನ್ನಡಿಗರನ್ನು ಯಾಕೆ ಪ್ರತಿನಿಧಿಸುತ್ತಿದ್ದೀರಿ? ನಿಮ್ಮನ್ನು ಸಂಸತ್ ಕನ್ನಡಿಗರು ಏಕೆ ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂಬುದನ್ನು ಮನಗಂಡು ಚರ್ಚೆಯಲ್ಲಿ ಭಾಗವಹಿಸಬೇಕು. ಇನ್ನೂ ಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲ. ಸಂಸತ್‍ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ನಿಷ್ಕ್ರಿಯರಾಗದೆ ಕನ್ನಡಿಗರ ಪರ ಧ್ವನಿಯೆತ್ತಬೇಕು. ಕನ್ನಡಿಗರ ಹಿತಕಾಯುವ ದೃಷ್ಟಿಯಲ್ಲಿ ಸದಾ ಎಚ್ಚರವಹಿಸಬೇಕು. ಕರ್ನಾಟಕದ ಪರ ಧ್ವನಿಗೆ ಪಕ್ಷಾತೀತವಾಗಿ ನಾವು ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News