ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು : ಮುಖ್ಯಮಂತ್ರಿ ಚಂದ್ರು

Update: 2024-09-13 16:13 GMT

ಬೆಂಗಳೂರು: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಬಿಜೆಪಿಯ ನಿರಂಕುಶ ಆಡಳಿತ, ಸರ್ವಾಧಿಕಾರಿ ವರ್ತನೆಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಸಿಬಿಐ ಬಳಸಿಕೊಂಡು ಸುಳ್ಳು ಆರೋಪ ಮಾಡಿ ಕೇಜ್ರಿವಾಲ್‍ರನ್ನು ಬಂಧಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್‍ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‍ನಲ್ಲಿ ಸತ್ಯಕ್ಕೆ ಗೆಲುವು ಸಿಕ್ಕಿದೆ. ಪ್ರಾಮಾಣಿಕತೆಗೆ ಎಂದೂ ಸೋಲಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.

ಸುಪ್ರೀಂ ಕೋರ್ಟ್ ಇಂದು ನೀಡಿರುವ ತನ್ನ ಆದೇಶದಲ್ಲಿ ಸಿಬಿಐ ಸಂಸ್ಥೆಯನ್ನು ಪಂಜರದ ಗಿಣಿ ಎನ್ನುವ ಮೂಲಕ ಕೇಂದ್ರ ಸರಕಾರದ ಸೂಚನೆಯಂತೆ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟವಾಗಿ ಹೇಳಿ ಛೀಮಾರಿ ಹಾಕಿದೆ. ಸಿಬಿಐ ನಡೆ ಬಗ್ಗೆಯೆ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಚಂದ್ರು ತಿಳಿಸಿದರು.

ಸಿಬಿಐ ತಾನು ಬಂಧಮುಕ್ತ ಗಿಣಿ ಎಂದು ನಿರೂಪಿಸಬೇಕು, ಸಂಶಯಾತೀತವಾಗಿ ಕೆಲಸ ಮಾಡಬೇಕು ಎಂದು ಹೇಳಿದೆ. ಇದು ಸಿಬಿಐ ಯಾರ ಪರ ಕೆಲಸ ಮಾಡುತ್ತಿದೆ ಎನ್ನುವನ್ನು ಮತ್ತೆ ಸಾಬೀತುಪಡಿಸಿದೆ. ಅಧರ್ಮ, ದಬ್ಬಾಳಿಕೆ, ಅನ್ಯಾಯ ತಾತ್ಕಾಲಿಕವಾಗಿ ಗೆಲುವು ಸಾಧಿಸಿದರೂ, ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಇಂದು ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪು ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಈ.ಡಿ ಪ್ರಕರಣದಲ್ಲಿ ಜಾಮೀನು ನೀಡಿದ್ದನ್ನು ವಿಫಲ ಮಾಡಲೆಂದೇ ಸಿಬಿಐ ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ, ಜೈಲಿನಲ್ಲೇ ಇಡಲು ಮೋದಿ ಸರಕಾರ ಸಂಚು ಮಾಡಿತ್ತು. ನರೇಂದ್ರ ಮೋದಿ ಇನ್ನಾದರೂ ದ್ವೇಷ ರಾಜಕಾರಣ ಬಿಟ್ಟು, ಜನತೆಯ ಕ್ಷಮೆ ಕೇಳಬೇಕು ಹಾಗೂ ಕೊಟ್ಟಿರುವ ಅವಕಾಶ ಬಳಸಿಕೊಂಡು ಸಾರ್ಥಕ ಕೆಲಸ ಮಾಡಲಿ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News