ಅಬಕಾರಿ ಸಚಿವರ ರಾಜೀನಾಮೆಗೆ ಮುಖ್ಯಮಂತ್ರಿ ಚಂದ್ರು ಆಗ್ರಹ
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಅಧಿಕಾರಿಗಳೇ ಸಚಿವರಿಗೆ ಲಂಚವನ್ನು ತಲುಪಿಸುತ್ತಿದ್ದಾರೆಂದು ಮದ್ಯ ಮಾರಾಟಗಾರರ ಸಂಘ ಆರೋಪ ಮಾಡಿದೆ. ಕೂಡಲೇ ಅದನ್ನು ತನಿಖೆ ಮಾಡಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ಶನಿವಾರ ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಅಬಕಾರಿ ಇಲಾಖೆಯಲ್ಲಿ ಅವ್ಯವಹಾರ ನಡೆದುಕೊಂಡು ಬಂದಿದೆ. ಬಿಜೆಪಿ ಅವಧಿಯಲ್ಲೂ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅಬಕಾರಿ ಇಲಾಖೆಯಲ್ಲಿ ಈವರೆಗೆ 900ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಗಳು ಕೇಳಿ ಬಂದಿವೆ ಎಂದು ದೂರಿದರು.
ಸಚಿವರಿಗೆ ಪ್ರತಿ ತಿಂಗಳು ಮಾಮೂಲಿ ಕೊಡಬೇಕೆಂದು ಇಲಾಖೆಯ ಅಧಿಕಾರಿಗಳೇ ಮದ್ಯದಂಗಡಿಗಳಲ್ಲಿ ಹಫ್ತಾ ವಸೂಲಿ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ಮದ್ಯ ಮಾರಾಟಗಾರರ ಸಂಘವೇ ಸಚಿವರ ವಿರುದ್ಧ ಆರೋಪ ಮಾಡಿದೆ ಎಂದರೆ ಇಲ್ಲಿ ಭ್ರಷ್ಟಾಚಾರ ಮಿತಿಮೀರಿರುವುದು ಸ್ಪಷ್ಟವಾಗಿದೆ. ಕೂಡಲೇ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಚಿವ ತಿಮ್ಮಾಪುರ ಅವರನ್ನು ಸಚಿವ ಸ್ಥಾನದಿಂದ ವಿಮುಕ್ತಿಗೊಳಿಸಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ತನಿಖೆಗೆ ಆದೇಶ ಕೊಡಬೇಕು. ಈ ವಿಚಾರದಲಿ ಸರಕಾರ ಮೌನವಾಗಿದ್ದರೆ ಭ್ರ ಭ್ರಷ್ಟಾಚಾರಕ್ಕೆ ಒಪ್ಪಿಗೆ ಇದೆ ಎನ್ನುವ ಕೆಟ್ಟ ಸಂದೇಶ ರವಾನಿಸದಂತಾಗುತ್ತದೆ. ಈ ಕೂಡಲೇ ಕ್ರಮ ತೆಗೆದುಕೊಂಡು ಭ್ರಷ್ಟಾಚಾರವನ್ನು ಸಹಿಸಲ್ಲ ಎನ್ನುವ ಸಂದೇಶ ಕೊಡಬೇಕಿದೆ ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ಉದ್ಯಮಿ ಅಜೀಂ ಪ್ರೇಮ್ಜೀ ಫೌಂಡೇಷನ್ ಸರಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳಿಗೆ ವಾರದಲ್ಲಿ 6ದಿನ ಮೊಟ್ಟೆ ನೀಡುವ ಯೋಜನೆಗೆ 1,500ಕೋಟಿ ರೂ.ಬಿಡುಗಡೆ ಮಾಡಿದ್ದಾರೆ. ಆದರೆ ಮೌಲ್ಯಮಾಪನ ಅಧ್ಯಯನ ವರದಿಯಲ್ಲಿ ಮಕ್ಕಳಿಗೆ ಮೊಟ್ಟೆಯನ್ನೇ ಕೊಡುತ್ತಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಹೀಗೆ ದಾನಿಗಳು ಕೊಡುವ ಹಣದಲ್ಲೂ ಭ್ರಷ್ಟಾಚಾರ ಮಾಡಿದರೆ ಮುಂದಿನ ದಿನಗಳಲ್ಲಿ ದಾನ ಮಾಡಲು ಯಾರು ಮುಂದೆ ಬರುತ್ತಾರೆ. ಬಿಜೆಪಿ ಸರಕಾರ ಇದ್ದಾಗ ಮೊಟ್ಟೆ ಪೂರೈಕೆಯಲ್ಲಿ ಕಮಿಷನ್ ಪಡೆದ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್ ಅವಧಿಯಲ್ಲಿ ಮೊಟ್ಟೆಯನ್ನೇ ಕೊಡದೆ ವಂಚನೆ ಮಾಡಲಾಗುತ್ತಿದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮಾಡುತ್ತಿರುವುದೇನು ಎಂದು ಅವಲೋಕನ ಮಾಡಿಕೊಳ್ಳಬೇಕಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಗ್ರಾಮೀಣ, ಬಡ ಮಕ್ಕಳಿಗೆ ಮೊಟ್ಟೆ ವಿತರಿಸಲು ಕ್ರಮ ತೆಗೆದುಕೊಳ್ಳಿ’
-ಡಾ.ಮುಖ್ಯಮಂತ್ರಿ ಚಂದ್ರು, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ