ಭ್ರಷ್ಟಾಚಾರದ ಕೂಪದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ: ಛಲವಾದಿ ನಾರಾಯಣಸ್ವಾಮಿ ಆರೋಪ

Update: 2024-11-12 16:53 GMT

ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಸರಕಾರದ 38 ಇಲಾಖೆಗಳೂ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದೆಲ್ಲವನ್ನೂ ನಮ್ಮ ಪಕ್ಷದ ಮುಖಂಡರು ಬೆಳಕಿಗೆ ತರುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಕೂಪದಲ್ಲಿ ಕುಳಿತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಮಂಗಳವಾರ ನಗರದ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಟುಂಬವು ಮುಡಾದ 14 ನಿವೇಶನ ವಾಪಸ್ ಮಾಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ 5 ಎಕರೆ ವಾಪಸ್ ಮಾಡಿದ್ದರಿಂದ ಭ್ರಷ್ಟಾಚಾರ ಸಾಬೀತಾಗಿದೆ. ಅದರ ತನಿಖೆ ಏನಿದ್ದರೂ ನಿಮ್ಮ ಕಸರತ್ತು ಅಷ್ಟೇ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯರೇ, ನೀವು ಮಾತನಾಡುವಾಗ ಯಾವ ಮಟ್ಟಕ್ಕೆ ಹೋಗುತ್ತೀರಿ? ಪ್ರಧಾನಿಯವರ ಯೋಗ್ಯತೆ, ತಮ್ಮ ಯೋಗ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ವಯಸ್ಸು, ಅಧಿಕಾರದಲ್ಲಿ ನೀವು ಅವರ ಮಟ್ಟಕ್ಕಿದ್ದರೆ ಅವರನ್ನು ಪ್ರಶ್ನೆ ಮಾಡುವುದರಲ್ಲಿ ಅರ್ಥವಿದೆ. ಸಣ್ಣಸಣ್ಣ ವ್ಯಕ್ತಿಗಳೂ ಪ್ರಧಾನಿಯನ್ನು ಕೀಳು ಭಾಷೆಯಲ್ಲಿ ಮಾತನಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಈಚೆಗೆ ವೈನ್ ಮರ್ಚೆಂಟ್ ಅಸೋಸಿಯೇಶನ್ ಒಂದು ಆಪಾದನೆ ಮಾಡಿದೆ. ಸುಮಾರು 500 ಕೋಟಿ ರೂ.ಗಳಷ್ಟು ಹಣವನ್ನು ಅಬಕಾರಿ ಸಚಿವರು ವಸೂಲಿ ಮಾಡಿದ್ದಾಗಿ ಹೇಳಿದ್ದಾರೆ. ಬಳಿಕ ಸುಲಿಗೆ ನಮ್ಮ ಗಮನಕ್ಕೂ ಬಂದಿದ್ದು, 700 ಕೋಟಿ ರೂ.ಲೂಟಿಯಾಗಿದೆ ಎಂದು ನಾವು ತಿಳಿಸಿದ್ದೆವು. ಇದು ಚುನಾವಣೆ ನಡೆಯುವ ಕಾರಣ ಆಗಿದೆ. ಈ ವಿಚಾರವನ್ನು ಪ್ರಧಾನಿ ಮೋದಿ ಮಹಾರಾಷ್ಟ್ರದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ, ತಪ್ಪೇನು? ಎಂದು ಕೇಳಿದರು.

ಅಬಕಾರಿ ಇಲಾಖೆ ಹಗರಣವನ್ನು ಅಲ್ಲಗಳೆಯುವ ಭರದಲ್ಲಿ ಸಿದ್ದರಾಮಯ್ಯನವರೇ ನೀವು ಭ್ರಷ್ಟಾಚಾರ ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ. ಗುತ್ತಿಗೆದಾರರ ಸಂಘದವರು ಬಿಜೆಪಿ ಸರಕಾರ ಶೇ.40 ವಸೂಲಿ ಮಾಡುತ್ತಿದೆ ಎಂದು ಆಪಾದಿಸಿದ್ದರಲ್ಲವೇ? ಅದನ್ನು ಅವರು ಸಾಬೀತು ಪಡಿಸಿದ್ದಾರಾ? ನೀವು ಅದನ್ನು ಚುನಾವಣಾ ಮುಖ್ಯ ವಿಷಯ ಮಾಡಿಕೊಂಡಿರಲ್ಲವೇ? ಇದುವರೆಗೂ ಅದನ್ನು ಸಾಬೀತುಪಡಿಸಲು ನಿಮಗೆ ಆಗಿದೆಯೇ ಎಂದು ಕೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News