ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು : ಸಚಿವ ಡಾ.ಮಹದೇವಪ್ಪ
ಬೆಂಗಳೂರು : ಮಕ್ಕಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಭಾರತದ ಉತ್ತಮ ಪ್ರಜೆಗಳಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕರೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿರುವ ಡಾ.ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್) ವತಿಯಿಂದ ಆಯೋಜಿಸಿದ್ದ ‘ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರೊಡನೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಸಾಮಾಜಿಕ, ಶೈಕ್ಷಣಿಕ, ಪ್ರಾದೇಶಿಕ ಭಿನ್ನತೆಯಿಂದ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರಕಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್) ಅಡಿಯಲ್ಲಿ ಪ್ರಸ್ತುತ 821 ವಸತಿ ಶಾಲೆ, ಪದವಿ ಪೂರ್ವ ವಸತಿ ಕಾಲೇಜುಗಳು ಆಂಗ್ಲ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ವಸತಿ ಶಾಲಾ ಕಾಲೇಜುಗಳಲ್ಲಿ 2,11,920 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿರುತ್ತದೆ. ಆ ಮೂಲಕ ದೇಶದಲ್ಲಿಯೇ ಅತಿ ಹೆಚ್ಚು ವಸತಿ ಶಾಲೆಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಯು ಕರ್ನಾಟಕದ್ದಾಗಿದೆ ಎಂದರು.
ಆರನೇ ತರಗತಿ ಪ್ರವೇಶಕ್ಕೆ ಲಭ್ಯವಿರುವ 41,110 ಸೀಟುಗಳಲ್ಲಿ 20,555(ಶೇ.50)ಅನ್ನು ಸಾಮಾಜಿಕ, ಆರ್ಥಿಕವಾಗಿ ಕಟ್ಟಕಡೆಯ ಸ್ಥಾನದಲ್ಲಿರುವ ಸಫಾಯಿ ಕರ್ಮಚಾರಿ/ಚಿಂದಿ ಆಯುವವರು, ಸ್ಮಶಾನ ಕಾರ್ಮಿಕರು, ಜೀತವಿಮುಕ್ತರು, ಮಾಜಿ ದೇವದಾಸಿಯರ ಮಕ್ಕಳು ಹಾಗೂ ಅಂಗವಿಕಲರು, ಅಲೆಮಾರಿ/ ಅರೆಅಲೆಮಾರಿ/ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೆ ನೇರ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
2023-24ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್)798 ಶಾಲೆಗಳ ವಿದ್ಯಾರ್ಥಿಗಳು 35,303 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದು, 33,891 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡವಾರು ಫಲಿತಾಂಶ ಶೇ.96 ಆಗಿರುತ್ತದೆ. ರಾಜ್ಯದ ಫಲಿತಾಂಶವು ಶೇ.72.40 ಆಗಿದ್ದು, ವಸತಿ ಶಾಲೆಗಳ ಫಲಿತಾಂಶವು ರಾಜ್ಯ ಸರಾಸರಿಗಿಂತ ಶೇ.22.60 ರಷ್ಟು ಹೆಚ್ಚಾಗಿದೆ. ಅಲ್ಲದೇ ಸರಕಾರಿ ಶಾಲೆಗಳ ಫಲಿತಾಂಶವು 69.7 ಆಗಿದ್ದು, ವಸತಿ ಶಾಲೆಗಳ ಫಲಿತಾಂಶವು 26.3 ರಷ್ಟು ಹೆಚ್ಚಾಗಿರುವುದು ಗುಣಮಟ್ಟದ ಫಲಿತಾಂಶಕ್ಕೆ ಸಾಕ್ಷಿಯಾಗಿದೆ ಎಂದು ಅವರು ನುಡಿದರು.
ಕ್ರೈಸ್ ವ್ಯಾಪ್ತಿಯ 84 ಪದವಿ ಪೂರ್ವ ಕಾಲೇಜುಗಳ ಪಿಯುಸಿಯಲ್ಲಿ ಒಟ್ಟಾರೆ ಶೇ.97.68 ಫಲಿತಾಂಶ ದಾಖಲಾಗಿದೆ. ಪಿ.ಯು.ಕಾಲೇಜುಗಳ ರಾಜ್ಯದ ಸರಾಸರಿ ಫಲಿತಾಂಶ ಶೇ.81.15 ರಷ್ಟಿದ್ದು, ಕ್ರೈಸ್ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳ ಒಟ್ಟಾರೆ ಫಲಿತಾಂಶವು ಶೇ.16.53 ರಷ್ಟು ಹೆಚ್ಚಾಗಿರುತ್ತದೆ. ಡಿಸ್ಟಿಂಕ್ಷನ್(ಶೇ.85 ಕ್ಕಿಂತ ಹೆಚ್ಚು ಅಂಕ)ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಶೇ.40.23(2,117) ರಷ್ಟಿದೆ. ಕ್ರೈಸ್ನ ಶೇ.97.71 ವಿದ್ಯಾರ್ಥಿಗಳು ಅತ್ಯುನ್ನತ ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಹೆಣ್ಣು ಮಕ್ಕಳ ಸಬಲೀಕರಣದ ಭಾಗವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ವಸತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗಾಗಿ ‘ಓಬವ್ವ ಸ್ವರಕ್ಷಣಾ ಕರಾಟೆ ತರಬೇತಿ’ ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿ ತರಬೇತಿಯನ್ನು ನೀಡಲಾಗುತ್ತಿದೆ. ಚಿಲ್ಡ್ರನ್ ಕಾನ್ಸ್ಟಿಟ್ಯುಷನಲ್ ಕ್ಲಬ್‌ಗಳನ್ನು ವಸತಿ ಶಾಲೆಗಳಲ್ಲಿ ರಚಿಸಿ, ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಭೋಸರಾಜ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಸೋಮನಾಥ್, ಸಮಾಜ ಕಲ್ಯಾಣ ಇಲಾಖೆ ಸರಕಾರ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಆಯುಕ್ತ ಡಾ. ರಾಕೇಶ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.
‘ಹ್ಯಾಮ್ ರೇಡಿಯೋ ಒಂದು ವೈಜ್ಞಾನಿಕ ಹವ್ಯಾಸವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೇಶ ಮತ್ತು ವಿದೇಶಗಳ ಹಲವಾರು ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಿ, ವಿನಿಮಯ ಹೆಚ್ಚಿಸಿಕೊಳ್ಳುವ ಹಾಗೂ ಕಲಿಕಾ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ನೈಸರ್ಗಿಕ ವಿಕೋಪದಲ್ಲಿ ವಸತಿ ಶಾಲೆಗಳನ್ನು ತುರ್ತು ಸಂಪರ್ಕ ಏರ್ಪಡಿಸುವ ದೃಷ್ಟಿಯಲ್ಲಿ ಹ್ಯಾಮ್ ರೇಡಿಯೋಗಳನ್ನು 21 ವಸತಿ ಶಾಲೆಗಳಲ್ಲಿ ಅಳವಡಿಸಿಕೊಂಡಿರುವುದು ಕ್ರೈಸ್ನ ಹೆಮ್ಮೆ’
-ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ