1500 ಕೋಟಿ ರೂ.ಮೌಲ್ಯದ 2602 ಎಕರೆ ಅರಣ್ಯ ಒತ್ತುವರಿ ಭೂಮಿ ತೆರವು : ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು : ಅರಣ್ಯ ಇಲಾಖೆಗೆ ನೀಡಲಾದ ವಾರ್ಷಿಕ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡಿರುವುದೇ ಅಲ್ಲದೆ, ರಾಜ್ಯದ ಅರಣ್ಯ ವಲಯ ವ್ಯಾಪ್ತಿಯ ಜೊತೆಗೆ ತನ್ನ ಆದಾಯವನ್ನೂ ಹೆಚ್ಚಿಸಿಕೊಂಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು," 2019-20ರ ಸಾಲಿನಲ್ಲಿದ್ದ ಅರಣ್ಯ ಇಲಾಖೆಯ ರಾಜಸ್ವ ಸಂಗ್ರಹಣೆ 263.41 ಕೋಟಿ ರೂ.ಗಳಿಂದ 2023-24ರ ಸಾಲಿನಲ್ಲಿ 417.84 ಕೋಟಿ ರೂ.ಗೆ ಹೆಚ್ಚಳವಾಗಿದೆ. 2023-24ನೆ ಸಾಲಿನಲ್ಲಿ ಅಧಿಸೂಚಿತ ಕಾಯ್ದಿಟ್ಟ ಅರಣ್ಯ (ಸೆಕ್ಷನ್ 17) ವ್ಯಾಪ್ತಿ 3395.73 ಹೆಕ್ಟೇರ್ ಅಂದರೆ ಸುಮಾರು 8300 ಎಕರೆಯಷ್ಟು ಹೆಚ್ಚಳವಾಗಿದ್ದರೆ, ರಕ್ಷಿತ ಅರಣ್ಯ ಪ್ರದೇಶ(ಸೆಕ್ಷನ್ 33) 184.52 ಹೆಕ್ಟೇರ್ ಅಂದರೆ 456 ಎಕರೆ ಹೆಚ್ಚಳವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 2ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, 3 ಎಕರೆಗಿಂತಲೂ ಕಡಿಮೆ ಭೂಮಿ ಮಾತ್ರ ಇರುವ ಬಡ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಹಾಗೂ 3 ಎಕರೆಗಿಂತಲೂ ಹೆಚ್ಚು ಅರಣ್ಯ ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 371 ಪ್ರಕರಣಗಳಲ್ಲಿ ಸುಮಾರು 2602.30 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ತೆರವು ಮಾಡಲಾದ ಅರಣ್ಯ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು 1500 ಕೋಟಿ ರೂ.ಗಳು ಎಂದು ಈಶ್ವರ್ ಖಂಡ್ರೆ ಹೇಳಿದರು.
ಕೋಲಾರದಲ್ಲಿ ಅತಿ ಹೆಚ್ಚು ಅಂದರೆ 1392.41 ಎಕರೆ ಅರಣ್ಯ ಜಮೀನು ಒತ್ತುವರಿ ತೆರವು ಮಾಡಿಸಲಾಗಿದೆ. ಮಡಿಕೇರಿಯಲ್ಲಿ 5 ಎಕರೆ 50 ಗುಂಟೆ ತೆರವು ಮಾಡಲಾಗಿದೆ. ಬೆಂಗಳೂರಿನ ಕೊತ್ತನೂರಿನಲ್ಲಿ 17 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು 500 ಕೋಟಿ ರೂ.ಗೂ ಅಧಿಕ ಎಂದು ಅವರು ಮಾಹಿತಿ ನೀಡಿದರು.
5 ಕೋಟಿ ಸಸಿ: ಕಳೆದ ವರ್ಷ ವಿಶ್ವ ಪರಿಸರ ದಿನದಂದು ಘೋಷಿಸಿದಂತೆ 5 ಕೋಟಿ 40ಲಕ್ಷ ಸಸಿಗಳನ್ನು ರಾಜ್ಯದಾದ್ಯಂತ ನೆಡಲಾಗಿದ್ದು, ಇವುಗಳ ಪೈಕಿ ಎಷ್ಟು ಬದುಕುಳಿದಿವೆ ಎಂದು ತಿಳಿಯಲು ಆಡಿಟ್ ಮಾಡಿ 3 ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಸಾಲಿನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕಾಗಿ ಹೆಚ್ಚುವರಿಯಾಗಿ 100 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಖಾಲಿ ಹುದ್ದೆಗಳ ಭರ್ತಿ: ಅರಣ್ಯ ಇಲಾಖೆಯಲ್ಲಿ ಸುಮಾರು 6 ಸಾವಿರ ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಅರಣ್ಯ ವೀಕ್ಷಕರ 310 ಹುದ್ದೆಗಳ ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ಪೂರ್ಣವಾಗಿದ್ದು, ನೀತಿ ಸಂಹಿತೆ ತೆರವಾದ ಬಳಿಕ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು. 540 ಅರಣ್ಯ ರಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 10 ವಲಯ ಅರಣ್ಯ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಶೀಘ್ರ ಲಿಖಿತ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಿಣಿದಾರರ 143 ಹುದ್ದೆ, 45 ದ್ವಿತೀಯ ದರ್ಜೆ ಸಹಾಯಕರು ಮತ್ತು 18 ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ವಿವಿಧ ವೃಂದದ ಖಾಲಿ ಹುದ್ದೆಗಳ ನೇಮಕಾತಿಗೂ ಕರಡು ಪ್ರಸ್ತಾವನೆ ಸಿದ್ಧಗೊಂಡಿದೆ ಎಂದು ಅವರು ವಿವರಿಸಿದರು.
ಗುತ್ತಿಗೆ ಭೂಮಿ ವಶಕ್ಕೆ ಕ್ರಮ: ಕೊಡಗು, ಚಾಮರಾಜನಗರ, ಮೈಸೂರು ಭಾಗದಲ್ಲಿ ಸುಮಾರು 7500 ಎಕರೆ ಅರಣ್ಯ ಭೂಮಿಯನ್ನು ವಿವಿಧ ಕಂಪೆನಿಗಳಿಗೆ ಬ್ರಿಟಿಷರ ಕಾಲದಲ್ಲಿ ಗುತ್ತಿಗೆ ನೀಡಲಾಗಿದ್ದು, ಈ ಕಂಪೆನಿಗಳಿಂದ ಸುಮಾರು 2 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಅವಧಿ ಮುಗಿದ ಭೂಮಿ ಮರು ವಶಕ್ಕೆ ಪಡೆಯಲು ಕ್ರಮ ವಹಿಸಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದರು.
ವನ್ಯಜೀವಿ ಆವಾಸ ಸ್ಥಾನ ಅಭಿವೃದ್ಧಿಗೆ ಕ್ರಮ: ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ವನ್ಯಜೀವಿಗಳ ಆವಾಸಸ್ಥಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಲಾಂಟನಾ, ಸೆನ್ನಾ ಮೊದಲಾದ ಕಳೆಗಳನ್ನು ತೆಗೆಯುವುದು, ಹುಲ್ಲುಗಾವಲು ಅಭಿವೃದ್ಧಿ, ಜಲ ಮೂಲಗಳ ಅಭಿವೃದ್ಧಿಯೂ ಸೇರಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಮಾನವ-ವನ್ಯಜೀವಿ ಸಂಘರ್ಷ ತಡೆಯಲು ರೈಲ್ವೆ ಬ್ಯಾರಿಕೇಡ್, ಆನೆ ನಿರೋಧಕ ಕಂದಕ, ಸೌರ ತಂತಿಬೇಲಿ ಅಳವಡಿಕೆ ಕಾರ್ಯವನ್ನು ಆದ್ಯತೆಯ ಮೇಲೆ ನಿರ್ವಹಿಸಲಾಗುತ್ತಿದೆ. ಈವರೆಗೆ 332.62 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಗುರಿಯನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ 101 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ವಿವರ ನೀಡಿದರು.
ಆನೆ, ಚಿರತೆ ಕಾರ್ಯಪಡೆ: ಹಾಲಿ ಇರುವ 5 ಆನೆ ಕ್ಷಿಪ್ರ ಕಾರ್ಯಾಚರಣೆ ಪಡೆಗಳ ಜೊತೆಗೆ ರಾಮನಗರ ಮತ್ತು ಬನ್ನೇರುಘಟ್ಟದಲ್ಲಿ 2 ಕಾರ್ಯಪಡೆ ಹಾಗೂ ಬೆಂಗಳೂರಿಗೆ ಸಮರ್ಪಿತವಾಗಿ ಒಂದು ಚಿರತೆ ಕಾರ್ಯಪಡೆ ರಚನೆ ಮಾಡಲಾಗಿದೆ. ಕಾಡಾನೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 324 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದ್ದು, ಇದಕ್ಕಾಗಿ ವಾರ್ಷಿಕ 250 ಕೋಟಿ ರೂ. ಅನುದಾನದೊಂದಿಗೆ ಎರಡು ವರ್ಷದಲ್ಲಿ 500 ಕೋಟಿ ರೂ.ಅನುದಾನದಲ್ಲಿ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.