ಕನ್ನಡಕ್ಕಾಗಿ ಧ್ವನಿ ಎತ್ತಿದವರ ಬಂಧನಕ್ಕೆ ಖಂಡನೆ: ಬೇಷರತ್ ಬಿಡುಗಡೆಗೆ ಆಗ್ರಹ

Update: 2023-12-29 16:42 GMT

ಬೆಂಗಳೂರು: ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಹೋರಾಡಿದ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಕನ್ನಡಪರ ಹೋರಾಟಗಾರರ ಬಂಧನ ವಿರೋಧಿಸಿ ನಗರದಲ್ಲಿ ನಡೆದ ಖಂಡನಾ ಸಭೆಯಲ್ಲಿ ಸರಕಾರದ ನಡೆಗೆ ಸಾಹಿತಿಗಳು, ಹೋರಾಟಗಾರರು ತೀವ್ರ ಖಂಡನೆ ವ್ಯಕ್ತಪಡಿಸಿ, ಬಂಧಿತರ ಬೇಷರತ್ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ವಸಂತನಗರದಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿದ ಕನ್ನಡ ಹೋರಾಟಗಾರ ಪ್ರವೀಣ್‍ಕುಮಾರ್ ಶೆಟ್ಟಿ, ವಿರೋಧ ಪಕ್ಷದಲ್ಲಿ ಬೆಂಬಲ ಕೊಡುತ್ತಾರೆ, ಆಡಳಿತಕ್ಕೆ ಬಂದರೆ ಜೈಲಿಗೆ ಕಳಿಸುತ್ತಾರೆ. ಶೇ.60ರಷ್ಟು ಕನ್ನಡ ಬಳಸಬೇಕೆಂಬ ಕಾನೂನು ಇದೆ. ಆದರೆ, ಅದು ಜಾರಿಯಾಗಿಲ್ಲ. ನಾವು ಉದ್ದೇಶ ಪೂರ್ವಕವಾಗಿ ಕಲ್ಲು ಹೊಡೆದಿಲ್ಲ. ಆದರೆ ಸರಕಾರ ಉದ್ದೇಶ ಪೂರ್ವಕವಾಗಿ ನಮ್ಮ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದಾರೆ ಎಂದರು.

ಕನ್ನಡ ಭಾಷೆ, ಕನ್ನಡಿಗರ ಮೇಲೆ ದಾಳಿ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ದೊಂಬಿ ಮಾಡಿದವರ ವಿರುದ್ಧ ಪ್ರಕರಣವನ್ನು ವಾಪಸ್ ಮಾಡಲಾಗುತ್ತದೆ. ಆದರೆ ಕನ್ನಡಪರ ಹೋರಾಟಗಾರರ ವಿರುದ್ಧ ಪ್ರಕರಣ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಇಂದು ವಿಷಮ ಪರಿಸ್ಥಿತಿಯಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಪ್ರತಿಯೊಂದಕ್ಕೂ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಸಿಎಂ, ಡಿಸಿಎಂ ನಿಲುವು ಸರಿಯಲ್ಲ. ಕನ್ನಡದ ಮೇಲೆ ಪ್ರಹಾರ ಮಾಡುತ್ತಿದ್ದಾರೆ. ಅವರ ತಾರುಣ್ಯದ ದಿನಗಳಲ್ಲಿ ಕನ್ನಡ ಪರ ಹೋರಾಟ ನಡೆಸಿಲ್ಲವೇ, ಇವಾಗ ಅಧಿಕಾರ ಸಿಕ್ಕಿದೆ ಎಂದು ಹೀಗೆ ನಡೆದುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.

ಸ್ವಾಭಿಮಾನ ನಮ್ಮ ಅಸ್ತ್ರವಾಗಿದೆ. ನಾರಾಯಣಗೌಡ ಅವರ ಬಂಧನ ಸಮರ್ಥನೀಯವಲ್ಲ. ಸರಕಾರದ ಕೈಯಲ್ಲಿ ಲಾಠಿ ಇದೆ ಎಂದು ಹೊಡೆದರೆ ಯಾವ ಕನ್ನಡಿಗ ಸುಮ್ಮನಿರುತ್ತಾನೆ? ಪ್ರತಿಭಟನೆ ನಮ್ಮ ಹಕ್ಕು. ಸುಸೂತ್ರವಾಗಿರುವಾಗ ಪ್ರತಿಭಟನೆ ಮಾಡಿದ್ದೇವಾ, ಮುಗ್ದ ಕನ್ನಡಿಗರ ಮೇಲೆ ಪರಾಕ್ರಮ ಮಾಡುವುದು ಸರಿಯಲ್ಲ ಎಂದು ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದರು.

ಪರಕೀಯರು ಕನ್ನಡ ಕಲಿಯಬೇಕು. ಕನ್ನಡ ಕಲಿಯದಿದ್ದರೆ ಉಳಿಗಾಲ ಇಲ್ಲ. ಕನ್ನಡ ಕಲಿಯದೆ ಬದುಕುವುದು ಸಾಧುವೇ, ಈ ಬಗ್ಗೆ ಆತ್ಮವಿಮರ್ಶೆ ಮಾಡಬೇಕು ಎಂದು ದೊಡ್ಡರಂಗೇಗೌಡ ಆಗ್ರಹಿಸಿದರು.

ಸಿನಿಮಾ ನಿರ್ಮಾಪಕ ಹಾಗೂ ಕನ್ನಡ ಹೋರಾಟಗಾರ ಸಾರಾ ಗೋವಿಂದ್ ಮಾತನಾಡಿ, ನಮ್ಮ ನಡುವೆ ಭಿನ್ನಾಭಿಪ್ರಾಯ ಇದ್ದರೂ, ಇಂತಹ ಸಂದರ್ಭಗಳಲ್ಲಿ ಕನ್ನಡ ಹೋರಾಟಗಾರರ ಪರ ನಿಲ್ಲಬೇಕಿದೆ. ಗೋಕಾಕ್ ಚಳುವಳಿಯ ಸಂದರ್ಭದಲ್ಲೂ ವಿರೋಧ ಮಾಡಿದವರು ಇದ್ದರು. ದ್ವಂದ್ವ ನಿಲುವು ಸಹಜ. ಆದರೆ ಅಪಸ್ವರ ಬೇಡ. ಕರ್ನಾಟಕದಲ್ಲಿ ಕನ್ನಡ ಬೆಳೆಯದೆ ಇರಲು 1956ನೇ ಇಸವಿಯಿಂದ ರಾಜ್ಯ ಆಳಿದವರು ನೇರ ಹೊರೆ. ಕನ್ನಡ ಕಡ್ಡಾಯಕ್ಕೆ, ಕನ್ನಡಿಗರಿಗೆ ಉದ್ಯೋಗ ವಿಚಾರವಾಗಿ 120 ಸರಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಅದನ್ನು ಜಾರಿಗೊಳಿಸಲು ಬದ್ಧತೆ ಇಲ್ಲ. ಇದು ದುರ್ದೈವ ಎಂದು ತಿಳಿಸಿದರು.

ಕಾವೇರಿ, ಮೇಕೆದಾಟು ಹೋರಾಟದ ಸಂದರ್ಭದಲ್ಲಿ ಕೆಲವರು ನೈತಿಕ ಬೆಂಬಲ ಎಂದರು. ಆದರೆ ನಾವು ಇವತ್ತು ನೇರ ಬೆಂಬಲ ನೀಡುತ್ತೇವೆ. ಸರಕಾರ ಕಣ್ಣೊರೆಸುವ ತಂತ್ರ ಮಾಡಬಾರದು. ನಮ್ಮ ಹೋರಾಟ ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ.60ರಷ್ಟು ಕನ್ನಡ ಕಡ್ಡಾಯಕ್ಕೆ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಆದರೆ, ಶೇ.60ರಷ್ಟು ಅಲ್ಲ 80ರಷ್ಟು ಕನ್ನಡ ಇರಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಸಾರಾ ಗೋವಿಂದ್ ಒತ್ತಾಯಿಸಿದರು.

ಹಿರಿಯ ಸಾಹಿತಿ ಹಂಪಾ ನಾಗರಾಜ್ ಮಾತನಾಡಿ, ಸರಕಾರ ಕೂಡಲೇ ಬಂಧಿತ ಕನ್ನಡ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಕನ್ನಡಕ್ಕಾಗಿ ಕಷ್ಟ ಬಂದಾಗ ಎಲ್ಲರೂ ಜಾಗೃತರಾಗಬೇಕು. ನಾನು ಕನ್ನಡಕ್ಕಾಗಿ ಜೈಲಿಗೆ ಹೋಗಲು ಸಿದ್ದನಿದ್ದೇನೆ, ಉಪವಾಸ ಮಾಡಲು ತಯಾರಿದ್ದೇನೆ. ಕನ್ನಡ ಹೋರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಸರಕಾರ ಕಾನೂನು ರೂಪಿಸಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News