ಹುಟ್ಟೂರನ್ನೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಅಭ್ಯರ್ಥಿ : ಎಚ್.ಡಿ.ಕುಮಾರಸ್ವಾಮಿ

Update: 2024-11-03 12:46 GMT

ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ‘ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಹುಟ್ಟೂರು ಚೆಕ್ಕೆರೆ ಗ್ರಾಮವನ್ನೇ ಅಭಿವೃದ್ಧಿ ಮಾಡಿಲ್ಲ, ಇನ್ನು ಅವರು ಇಡೀ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ?’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರವಿವಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಹುಟ್ಟೂರು ಚೆಕ್ಕೆರೆ ಗ್ರಾಮದಲ್ಲಿ ಎನ್‍ಡಿಎ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಭಾಷಣ ಮಾಡಿದ ಅವರು, ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹುಟ್ಟಿದ ಊರನ್ನೇ ಯಾವ ರೀತಿ ಇಟ್ಟುಕೊಂಡಿದ್ದರು ಎಂಬುದನ್ನು ನೋಡಿದ್ದೀರಿ. ನಾವು ಎಷ್ಟು ಅಭಿವೃದ್ಧಿ ಮಾಡಿದ್ದೇವೆ ನೋಡಲಿ. ಎಲ್ಲವೂ ಜನರ ಕಣ್ಣು ಮುಂದೆಯೇ ಇದೆ ಎಂದು ಹೇಳಿದರು.

ಹಿಂದೆ ಇದೇ ವ್ಯಕ್ತಿ ಡಿ.ಕೆ.ಸಹೋದರರನ್ನು ಬೈದುಕೊಂಡು ಓಡಾಡಿದ್ದರು. ಈಗ ಅವರನ್ನೇ ತಬ್ಬಿಕೊಂಡಿದ್ದಾರೆ. ನನ್ನನ್ನು ರಾಮನಗರಕ್ಕೆ ಹೊರಗಿನವನು ಎನ್ನುತ್ತಿದ್ದಾರೆ. ನಾನು ಹುಟ್ಟಿದ್ದು ಹಾಸನದಲ್ಲಿ, ಬೆಳೆಸಿದ್ದು ರಾಮನಗರ ಜಿಲ್ಲೆಯ ಜನ. ನಾನು ಕೊನೆಗೆ ಭೂಮಿಗೆ ಹೋಗೊದು ಈ ಮಣ್ಣಿನಲ್ಲೇ ಎಂದು ಅವರು ಭಾವುಕರಾದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ ಕೇಳುತ್ತಿರುವ ಆ ವ್ಯಕ್ತಿ ಈ ತಾಲೂಕಿಗೆ 20 ವರ್ಷ ಶಾಸಕರಾಗಿ ಏನು ಮಾಡಿದ್ದಾರೆ? ದಾಖಲೆಗಳಿವೆ, ಪರಿಶೀಲನೆ ಮಾಡಿ. ನಾನು ಐದು ವರ್ಷದಲ್ಲಿ ಏನು ಮಾಡಿದ್ದೇನೆಂಬುದು ನಿಮ್ಮ ಕಣ್ಣ ಮುಂದೆಯೇ ಇದೆ. ನೀವು ಯಾರಿಗೂ ಹೆದರದೇ ಚುನಾವಣೆ ಮಾಡಿ. ಈಗ ಕಾಂಗ್ರೆಸ್ ಅಭ್ಯರ್ಥಿ ಚುನಾವಣೆ ಬಳಿಕ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ? ರಾಮನಗರಲ್ಲಿ ಕೂಪನ್ ಹಂಚಿಕೊಂಡು ಚುನಾವಣೆ ಮಾಡಿದರು. ಚನ್ನಪಟ್ಟಣದಲ್ಲೂ ಆ ಕೆಲಸ ಆಗುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಮತ ನೀಡಿ ಎಂದು ಮನವಿ ಮಾಡಿದರು.

ಚಕ್ಕರೆ ಗ್ರಾಮದ ಯುವಕರು ತಂಡ ಕಟ್ಟಿಕೊಂಡು ನಿಖಿಲ್ ಗೆಲ್ಲಿಸಲು ಶ್ರಮಪಡುತ್ತಿದ್ದಾರೆ. ಈ ಚುನಾವಣೆ ಸಂದರ್ಭದಲ್ಲಿಯೇ ನಾಟಕೀಯ ಬೆಳವಣಿಗೆ ಆಗಿದೆ. ನಿಮ್ಮ ಗ್ರಾಮದ ಕಾಂಗ್ರೆಸ್ ಅಭ್ಯರ್ಥಿ ಪಕ್ಷಾಂತರ ಮಾಡಿದ್ದಾರೆ. ಅವರಿಗಿಂತ ಹೆಚ್ಚು ಈ ಗ್ರಾಮದಲ್ಲಿ ನಾವು ಅಭಿವೃದ್ಧಿ ಮಾಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಜನತೆ ಒತ್ತಡಕ್ಕೆ ಮಣಿದು ಅಭ್ಯರ್ಥಿಯಾದೆ. ಮಂಡ್ಯ ಜಿಲ್ಲೆಯ ಜನತೆ ಆಶೀರ್ವಾದ ಮಾಡಿ ಗೆಲ್ಲಿಸಿದರು. ಹಾಗಾಗಿ ಚನ್ನಪಟ್ಟಣಕ್ಕೆ ರಾಜಿನಾಮೆ ಕೊಡುವ ಅನಿವಾರ್ಯ ಬಂತು ಎಂದು ವಿವರಣೆ ನೀಡಿದರು.

ನಿಮ್ಮ ಗ್ರಾಮದ ನಾಯಕರನ್ನು ಅಭ್ಯರ್ಥಿ ಆಗಿ ಎಂದು ಕೇಳಿದೆವು. ನಮ್ಮ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಅಂದಿದ್ದೆ. ಆದರೆ, ಸುಳ್ಳು ಹೇಳಿಕೊಂಡು ಯಾವ ರೀತಿ ನಡೆದುಕೊಂಡರು ಎಂದು ನೋಡಿದ್ದೀರಿ. ಅವರಿಗೆ ಜೆಡಿಎಸ್‍ನಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದೆವು. ಆದಾದ ಬಳಿಕವೂ ಅವರು ಬಿಜೆಪಿಯಲ್ಲಿ ನಿಲ್ಲಬೇಕೆಂದು ಹಠ ಮಾಡಿದರು. ಅದಕ್ಕೂ ನಾನು ಒಪ್ಪಿಗೆ ಕೊಟ್ಟೆ. ಆದರೆ, ಹೇಳದೆ ಕೇಳದೆ ಬಿಜೆಪಿ ನಾಯಕರಿಗೂ ಟೋಪಿ ಹಾಕಿ ಕಾಂಗ್ರೆಸ್ ಸೇರಿದ್ದಾರೆ. ಈಗ ಚುನಾವಣೆಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News