ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು : ಈಶ್ವರ್ ಖಂಡ್ರೆ ವಿಶ್ವಾಸ

Update: 2024-11-12 17:07 GMT

ಈಶ್ವರ್ ಖಂಡ್ರೆ

ಬೆಂಗಳೂರು : ರಾಜ್ಯದ ಜನತೆ ಸರಕಾರದ ಪರವಾಗಿದ್ದು, ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕಾಲದಲ್ಲಿ ಹಲವು ಹಗರಣಗಳು ನಡೆದಿವೆ. ಇವುಗಳಲ್ಲಿ ಕೆ.ಕೆ.ಆರ್.ಡಿ.ಬಿ. ಹಗರಣವೂ ಒಂದು. ಈ ಬಗ್ಗೆ ಸಚಿವ ಸಂಪುಟದಲ್ಲೂ ಚರ್ಚೆ ಆಗಿದೆ. ತನಿಖೆಯೂ ನಡೆಯುತ್ತಿದೆ. ಕಾನೂನು ರೀತಿಯ ಕ್ರಮ ಆಗುತ್ತದೆ ಎಂದರು.

ಬಂಡೀಪುರ ಅರಣ್ಯ ಮಾರ್ಗವಾಗಿ ಕೇರಳಕ್ಕೆ ರಾತ್ರಿಯ ವೇಳೆ ಸಂಚಾರಕ್ಕೆ ಅನುಮತಿ ನೀಡುವ ಕುರಿತಂತೆ ಉಪ ಮುಖ್ಯಮಂತ್ರಿಯವರು ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಕುರಿತಂತೆ ನ್ಯಾಯಾಲಯದ ತೀರ್ಪು ಇದೆ. ಈ ಎಲ್ಲ ಅಂಶಗಳ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

‘ಮರಗಳ ಕಡಿದ ಆರೋಪ’ ಎಫ್ಐಆರ್ :

ಪೀಣ್ಯ ಪ್ಲಾಂಟೇಷನ್ನಲ್ಲಿ ಎಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಚಿತ್ರೀಕರಣ ನಡೆಯುತ್ತಿರುವ ಸ್ಥಳದಲ್ಲಿ ಮರಗಳ ಅಕ್ರಮ ಕಡಿತಲೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮೂರು ಸಂಸ್ಥೆಗಳ ವಿರುದ್ಧ ಎಫ್.ಐ.ಆರ್.ದಾಖಲಿಸಲಾಗಿದೆ. ಎಚ್ಎಂಟಿ, ಕೆನರಾ ಬ್ಯಾಂಕ್ಗೆ ಮಾರಾಟ ಮಾಡಿರುವ ಭೂಮಿಯನ್ನು ಕನ್ನಡ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಸೆಟ್ ಹಾಕಲು ಬಾಡಿಗೆಗೆ ನೀಡಲಾಗಿತ್ತು, ಇಲ್ಲಿದ್ದ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತನಿಖೆಗೆ ಸೂಚಿಸಿದ್ದೆ. ಪ್ರಾಥಮಿಕ ತನಿಖೆ ಕೈಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News