ಮಾದಕ ವಸ್ತುಗಳ ಮಾರಾಟಕ್ಕೆ ಸಂಚು: ಆರೋಪಿ ಸೆರೆ, 21 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶ

Update: 2023-12-12 19:07 GMT

ಬೆಂಗಳೂರು: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಮಾದಕ ವಸ್ತು ಹಾಗೂ ವಿದೇಶಿ ಪ್ರಜೆಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ  ಸಿಬ್ಬಂದಿಗಳ ತಂಡ ವಶಕ್ಕೆ ಪಡೆದಿರುವುದು ವರದಿಯಾಗಿದೆ.

ನೈಜೀರಿಯಾ ಮೂಲದ ಲಿಯೋನಾರ್ಡ್ ಒಕ್ವುಡಿಲಿ(44) ಬಂಧಿತ ಆರೋಪಿ. ಈತನಿಂದ 16 ಕೆ.ಜಿ ಮಾದಕ ಪದಾರ್ಥ, 500 ಗ್ರಾಂ ತೂಕದ ಕೊಕೇನ್ ಹಾಗೂ 1 ಮೊಬೈಲ್ ಹಾಗೂ ಇತರೆ ವಸ್ತುಗಳು ಸೇರಿ ಅಂದಾಜು 21 ಕೋಟಿ ರೂ. ಬೆಲೆ ಬಾಳುವ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

ವಿದೇಶಿ ಪ್ರಜೆಯಾಗಿರುವ ಆರೋಪಿಯು ಒಂದು ವರ್ಷದ ಹಿಂದೆ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದು, ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ.

2024ರ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಾದಕ ವ್ಯಸನಿಗಳಿಗೆ ನಿಷೇಧಿತ ಡ್ರಗ್ಸ್ ಮತ್ತು ಕೊಕೇನ್ ಅನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಿಲ್ಲಿ, ಮುಂಬೈ ಹಾಗೂ ಇತರೆ ರಾಜ್ಯಗಳಲ್ಲಿ ನೆಲೆಸಿರುವ ವಿದೇಶಿ ಮೂಲದ ವ್ಯಕ್ತಿಗಳಿಂದ ಚೂಡಿದಾರ್ ಬಟ್ಟೆ, ಬೆಡ್‍ಶೀಟ್ ಕವರ್‍ಗಳಲ್ಲಿ, ಸೋಪ್ ಬಾಕ್ಸ್ ಮತ್ತು ಚಾಕೊಲೇಟ್ ಬಾಕ್ಸ್ ಗಳಲ್ಲಿ ಮಾದಕ ವಸ್ತುಗಳನ್ನು ಅಡಗಿಸಿ ಯಾರಿಗೂ ಅನುಮಾನ ಬರದಂತೆ ಖರೀದಿಸಿಕೊಂಡು ತರುತ್ತಿದ್ದ ಮತ್ತು ಅವುಗಳನ್ನು ತನ್ನ ಮನೆಯಲ್ಲಿರಿಸಿಕೊಂಡಿದ್ದ.

ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿಯು ಹೊಸ ವರ್ಷದ ಆಚರಣೆಯ ಸಮಯದಲ್ಲಿ ಹೆಚ್ಚಿನ ಬೆಲೆಗೆ ಬೆಂಗಳೂರು ನಗರದಲ್ಲಿ ನಡೆಯುವ ಪಾರ್ಟಿಗಳಿಗೆ, ಗ್ರಾಹಕರುಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಐಟಿ-ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸುವ ಉದ್ದೇಶದಿಂದ ಮಾದಕ ವಸ್ತುಗಳನ್ನು ಸಂಗ್ರಹಿಸಿ ಗೌಪ್ಯವಾಗಿ ಶೇಖರಿಸಿಕೊಂಡಿರುವುದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಯ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಮತ್ತು ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಿಸಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News