ವಾಲ್ಮೀಕಿ ನಿಗಮದಲ್ಲಿ ಅಕ್ರಮ | ರಾಹುಲ್ ಗಾಂಧಿಗೆ ಹಣ ಕಳುಹಿಸಿದ ವಿಚಾರ ಹೊರ ಬರಬಹುದೆಂದು ಸಿಬಿಐ ತನಿಖೆಗೆ ಹಿಂದೇಟು: ಸದಾನಂದಗೌಡ

Update: 2024-06-01 12:04 GMT

screengrab : x/@BJP4Karnataka

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಣ ಕಳುಹಿಸಿದ ವಿಚಾರ ಹೊರಕ್ಕೆ ಬರಬಹುದೆಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮದ ಕುರಿತು ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಆರೋಪಿಸಿದರು.

ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಐಟಿಗಳು ರಾಜ್ಯ ಸರಕಾರ ನೀಡುವ ಆದೇಶ ಪಾಲಿಸುವ ಏಜೆನ್ಸಿಗಳು. ಸತ್ಯಾಂಶ ಹೊರಕ್ಕೆ ಬರಲು ಸಿಬಿಐ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.

ಇಷ್ಟು ದೀರ್ಘ ಕಾಲ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರಿಗೆ ನಾಗೇಂದ್ರರನ್ನು ವಜಾ ಮಾಡುವ ಧೈರ್ಯ ಇಲ್ಲ ಮತ್ತು ಭ್ರಷ್ಟಾಚಾರಕ್ಕೆ ಪುಷ್ಟಿ ಕೊಡುವ ದಾರಿಯಲ್ಲಿ ಮುಂದೆ ಮುಂದೆ ಹೋಗುತ್ತಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದರೆ ಇಂಥ ಸಚಿವನನ್ನು ಮರುದಿನವೇ ವಜಾ ಮಾಡುತ್ತಿದ್ದೆ. ಚಂದ್ರಶೇಖರ್ ಎಂಬ ಅಧಿಕಾರಿಯ ಆತ್ಮಹತ್ಯೆ ಆಗಿದೆ. ಈ ಹಗರಣ ಭ್ರಷ್ಟಾಚಾರಕ್ಕೆ ಒಂದು ಜ್ವಲಂತ ಸಾಕ್ಷಿ ಎಂದು ಅವರು ಹೇಳಿದರು.

ಹಲವು ಖಾಸಗಿ ವ್ಯಕ್ತಿಗಳಿಗೆ ಹಣ ವರ್ಗಾವಣೆ ಆಗಿದ್ದು, ಸರಕಾರ ಮಾಹಿತಿ ಕೊಡುತ್ತಿಲ್ಲ. ನಿಗಮದ ಅಧ್ಯಕ್ಷರು ಸತ್ಯ ಸಂಗತಿ ಯಾಕೆ ಬಿಡುಗಡೆ ಮಾಡಿಲ್ಲ ಎಂದ ಅವರು, ನಾಗೇಂದ್ರ ಎರಡು ದಿನಗಳಿಂದ ಕಾಣೆಯಾಗಿದ್ದಾರೆ. ಇದರ ಕುರಿತು ಮುಖ್ಯಮಂತ್ರಿ ಮಾಹಿತಿ ಕೊಡಲಿ ಎಂದು ತಿಳಿಸಿದರು.

ಪೂರ್ಣ ಪ್ರಮಾಣದ ಸಾಕ್ಷ್ಯಗಳಿದ್ದರೂ ಸಿದ್ದರಾಮಯ್ಯ ಮೌನಿ ಆಗಿರುವುದೇಕೆ? ಮಾತೆತ್ತಿದರೆ ನಾವು ಭ್ರಷ್ಟಾಚಾರದ ವಿರೋಧಿಗಳು, 40 ಪರ್ಸೆಂಟ್ ಕಮಿಷನ್ ಹೊಡೆದವರನ್ನು ಇಳಿಸಿದ್ದೀವಿ, ಭ್ರಷ್ಟಾಚಾರದ ತನಿಖೆ ಮಾಡಲು ಆಯೋಗ ರಚಿಸಿದ್ದಾಗಿ ಹೇಳುವ ಸಿದ್ದರಾಮಯ್ಯನವರು ಭ್ರಷ್ಟಾಚಾರ ಕಡಿಮೆ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಸದಾನಂದಗೌಡ ದೂರಿದರು.

15 ಖಾಸಗಿ ಕಂಪೆನಿಗಳಿಗೆ ಹಣ ವರ್ಗಾವಣೆ ಆಗಿದೆ. ಇದು ನೇರವಾಗಿ ಕಾಂಗ್ರೆಸ್ಸಿನ ಎಟಿಎಂಗೆ ಹೋಗುವ ಹಣವೆಂದು ಸಾಬೀತು ಪಡಿಸಿದೆ. ಸಚಿವರ ಸೂಚನೆ ಅಡಿಯಲ್ಲೇ ಇದು ನಡೆದಿದೆ ಎಂದು ಹೇಳಿದ್ದರೂ ಸಿದ್ದರಾಮಯ್ಯನವರು ಜಾಣಕುರುಡರಾಗಿ ನಾಗೇಂದ್ರ ರಾಜೀನಾಮೆ ಪಡೆದಿಲ್ಲ ಎಂದು ಅವರು ಟೀಕಿಸಿದರು.

3 ಖಾತೆಗಳು ಹೈದರಾಬಾದ್ ಮೂಲದವು. ಇದರ ಮೂಲಕ ತೆಲಂಗಾಣಕ್ಕೆ ಹಣದ ವ್ಯವಸ್ಥೆ ಮಾಡಿದ್ದಾರೆ ಎಂದು ಸದಾನಂದಗೌಡ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಎಸ್.ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮುಖಂಡ ಜಗದೀಶ ಹಿರೇಮನಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News