ಬೆಂಗಳೂರು | ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಬೆಂಕಿ ಅವಘಡ : ಮಹಿಳಾ ಉದ್ಯೋಗಿ ಸಜೀವ ದಹನ
ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆಯಲ್ಲಿ ಅಗ್ನಿ ಅವಘಢ ಸಂಭವಿಸಿದ ಪರಿಣಾಮ ಮಹಿಳಾ ಉದ್ಯೋಗಿಯೊಬ್ಬರು ಸಜೀವ ದಹನವಾಗಿರುವ ದುರ್ಘಟನೆ ಜರುಗಿದೆ.
ಮಂಗಳವಾರ ಸಂಜೆ ರಾಜಾಜಿನಗರದ ರಾಜ್‍ಕುಮಾರ್ ರಸ್ತೆಯಲ್ಲಿರುವ ಮೈ ಇವಿ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆಯಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು, ಪ್ರಿಯಾ (25) ಎನ್ನುವ ಮಹಿಳಾ ಉದ್ಯೋಗಿ ಅಗ್ನಿ ಜ್ವಾಲೆಯಲ್ಲಿ ಆಹುತಿಯಾಗಿದ್ದಾರೆ.
ಸಂಜೆ 5.30ರ ಸುಮಾರಿಗೆ ಸ್ಕೂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನೋಡು ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಮಳಿಗೆ ಆವರಿಸಿಕೊಂಡು ಹೊತ್ತಿ ಉರಿದಿದೆ.
ಈ ವೇಳೆ ಸಿಬ್ಬಂದಿಗಳೆಲ್ಲ ಹೊರ ಬಂದಿದ್ದರು. ಆದರೆ, ಪ್ರಿಯಾ ಮಾತ್ರ ಮಳಿಗೆ ಒಳಗೆ ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳೀಯರು ಅಗ್ನಿಶಾಮಕದ ದಳದ ಸಿಬ್ಬಂದಿಗೆ ಕರೆ ಮಾಡಿದ್ದು, ಅಷ್ಟರಲ್ಲಿಯೇ ಪ್ರಿಯಾ ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಆಕೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿ ಪ್ರಿಯಾಳ ತಂದೆ ಆರ್ಮುಗಂ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನೊಂದೆಡೆ ಮಳಿಗೆಯಲ್ಲಿದ್ದ 45ಕ್ಕೂ ಅಧಿಕ ಸ್ಕೂಟರ್ ಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಾಜಿನಗರ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು.