ಆರ್ಟಿಕಲ್ 371ಜೆ ಜಾರಿಗೆ ಹತ್ತು ವರ್ಷ ; ಸಂಭ್ರಮಾಚರಣೆಗೆ ಸರಕಾರದ ಸಿದ್ದತೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-08-20 11:17 GMT

ಕಲಬುರಗಿ: "ಆರ್ಟಿಕಲ್ 371 ಜೆ ಜಾರಿಯಾಗಿ ಹತ್ತು ವರ್ಷಗಳಾಗುತ್ತಿದ್ದು, ಇದರ ಸಂಭ್ರಮಾಚರಣೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಂಭ್ರಮಾಚರಣೆ ನೆನಪಿಗೆ 371 ಹಾಸಿಗೆಗಳನ್ನು ಒಳಗೊಂಡ ಜಯದೇವ ಆಸ್ಪತ್ರೆಯನ್ನು ಮುಂದಿನ ತಿಂಗಳು ಲೋಕಾರ್ಪಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕಲಬುರಗಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು “ಕಲಬುರಗಿಗೆ ಅಂತರರಾಷ್ಟೀಯ ಗುಣಮಟ್ಟದ ಇಎಸ್ ಐ ಆಸ್ಪತ್ರೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ತಂದರು. ಕಲಬುರಗಿ ರಾಜ್ಯದಲ್ಲಿ ಮೂರನೇ ಆರೋಗ್ಯ ಹಬ್ ಆಗಿ ರೂಪುಗೊಳ್ಳುತ್ತಿದೆ. ಇಂದಿರಾಗಾಂಧಿ ತಾಯಿ- ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿವೆ. ಇದರಿಂದ ಈ ಭಾಗದ ಜನರು ಬೆಂಗಳೂರು, ಹೈದರಾಬಾದ್ ಗೆ ಹೋಗುವುದು ತಪ್ಪಲಿದೆ. ಸಂಭ್ರಮಾಚರಣೆ ಕಾರ್ಯಕ್ರಮದ ಬಗ್ಗೆ ವಿರೋಧ ಪಕ್ಷದ ಇಬ್ಬರು ನಾಯಕರ ಜೊತೆ ಚರ್ಚೆ ನಡೆಸಿ, ದಿನಾಂಕ ಅಂತಿಮಗೊಳಿಸಲಾಗುವುದು” ಎಂದು ತಿಳಿಸಿದರು.

“ಆರ್ಟಿಕಲ್ 371 ಜೆ ಯನ್ನು ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ ಮಲ್ಲಿಖಾರ್ಜುನ ಖರ್ಗೆ ಅವರು ಮುಂದಾಳತ್ವವಹಿಸಿ ಜಾರಿಗೆ ತಂದರು. ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದಿದೆ” ಎಂದರು.

ತುಂಗಭದ್ರಾ ಗೇಟ್ ದುರಸ್ತಿ ಮಾಡಿದ ಪ್ರತಿ ಕಾರ್ಮಿಕರಿಗೂ ಗೌರವ ಸಲ್ಲಿಕೆ :

“70 ವರ್ಷಗಳ ಹಳೆಯ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟಿನ ಚೈನ್ ಲಿಂಕ್ ದುರಾದೃಷ್ಟವಶಾತ್ ತುಂಡಾಯಿತು. ಇದಕ್ಕೆ ಬಿಜೆಪಿ, ದಳದವರು ನಮ್ಮ ಮೇಲೆ ಗದಾಪ್ರಹಾರ ಮಾಡಿದರು. ನಾವು ಹಗಲು, ರಾತ್ರಿ ನಿದ್ದೆ ಮಾಡದೆ ಕಾರ್ಯಪ್ರವೃತ್ತರಾದೆವು. ಕೂಡಲೇ ಎಂಜಿನಿಯರ್ ಗಳು, ತಂತ್ರಜ್ಞರನ್ನು ಕರೆಸಿ ಗೇಟನ್ನು ಮತ್ತೆ ಅಳವಡಿಸಲಾಯಿತು. ಪ್ರತಿಯೊಬ್ಬ ಕೆಲಸಗಾರನೂ ಪಣತೊಟ್ಟು ಕೆಲಸ ಮಾಡಿದ್ದಾರೆ. ಈ ಕೆಲಸಕ್ಕೆ ಶ್ರಮಿಸಿದ ಚಿಕ್ಕ ಕಾರ್ಮಿಕರು, ಎಂಜಿನಿಯರ್ ಗಳು, ತಂತ್ರಜ್ಞರು, ಅಧಿಕಾರಿಗಳನ್ನು ಸನ್ಮಾನ ಮಾಡುವ ಕೆಲಸವನ್ನು ಸರ್ಕಾರ ಮುಂದಿನ ದಿನಗಳಲ್ಲಿ ಮಾಡುತ್ತದೆ” ಎಂದು ತಿಳಿಸಿದರು.

“ಅಣೆಕಟ್ಟನ್ನು ಉಳಿಸಿಕೊಂಡಿದ್ದೇ ದೊಡ್ಡ ಪವಾಡ. ಗೇಟ್ ದುರಸ್ತಿ ಮಾಡಿ ರೈತರ ಪಾಲಿನ ನೀರು ಉಳಿಸಿದಂತಾಯಿತು. ಇಡೀ ದೇಶವೇ ಏನಾಗಬಹುದು ಎಂದು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ. ಅದಕ್ಕೆ ನಾನು ಪದೇ, ಪದೇ ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂದು ಹೇಳುತ್ತಿರುತ್ತೇನೆ” ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News