ನಿಗಮಗಳಲ್ಲಿ ಕೆಲವು ಖದೀಮ ಅಧಿಕಾರಿಗಳು ಸೇರಿಕೊಂಡಿದ್ದಾರೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-07-20 10:36 GMT

Photo : x/@DKShivakumar

ಬೆಂಗಳೂರು : ನಿಗಮ ಮಂಡಳಿಗಳಲ್ಲಿ‌ ಪಾರದರ್ಶಕತೆ ತರಲು ರಾಜ್ಯ ಸರಕಾರ ಮುಂದಾಗಿದೆ. ಈ ಬಗ್ಗೆ ನಗರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು, " ಪಾರದರ್ಶಕತೆ ತರುವ ಬಗ್ಗೆ ನಿಗಮ ಮಂಡಳಿಯ ಅಧ್ಯಕ್ಷರಿಗೆ ನಾವು ಈಗಾಗಲೇ ಹೇಳಿದ್ದೇವೆ. ನಿಗಮಗಳಲ್ಲಿ ಕೆಲವು ಖದೀಮ ಅಧಿಕಾರಿಗಳು ಸೇರಿಕೊಂಡಿದ್ದು, ಬಿಜೆಪಿ ಆಡಳಿತದಲ್ಲೂ ತಿಂದು ಈಗ ಇಲ್ಲಿಯೂ ಸೇರಿಕೊಂಡಿದ್ದಾರೆ" ಎಂದು ಹೇಳಿದರು.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಗಮಗಳಲ್ಲಿ ಕೆಲವು ಖದೀಮ ಅಧಿಕಾರಿಗಳು ಸೇರಿಕೊಂಡಿದ್ದಾರೆ. ಬಿಜೆಪಿ ಅವಧಿಯಲ್ಲಿ 300 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ. ಅದೇ ಅಧಿಕಾರಿಗಳು ಈಗಲೂ ಇದ್ದು, ಡಿ ವರ್ಗದ ನೌಕರರನ್ನು ಎಂಡಿ ಮಾಡಿದ್ದಾರೆ. ಅಂತಹ ಪ್ರಕರಣಗಳನ್ನು ಪರಿಶೀಲನೆ ಮಾಡಲಾಗುವುದು” ಎಂದರು.

ಕೆರೆ ತುಂಬಿಸುವ ಕಾರ್ಯಕ್ಕೆ ಅಗತ್ಯ ಕ್ರಮ :

“ಇನ್ನೆರಡು ಮೂರು ದಿನಗಳಲ್ಲಿ ಕೆಆರ್‌ಎಸ್ ಅಣೆಕಟ್ಟು ತುಂಬಲಿದ್ದು, ತಮಿಳುನಾಡಿನ ಪಾಲಿನ ನೀರನ್ನು ಹರಿಸಬಹುದಾದ ಸೂಚನೆ ವ್ಯಕ್ತವಾಗಿವೆ. ಇದರ ಜತೆಗೆ ನಮ್ಮ ರೈತರ ಹಿತಕಾಯಲು ಕೆರೆ ತುಂಬಿಸುವ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಭತ್ತ ನಾಟಿ ಮಾಡುವ ಮುನ್ನ ಸ್ವಲ್ಪ ತಾಳ್ಮೆ ವಹಿಸಬೇಕು. ನೀರು ಎಷ್ಟು ಪ್ರಮಾಣದಲ್ಲಿ ಬರಲಿದೆ ಎಂಬುದು ಇನ್ನು ತಿಳಿದಿಲ್ಲ. ಹೀಗಾಗಿ ಕೃಷಿ ಇಲಾಖೆ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು" ಎಂದರು.

ಜಿಲ್ಲಾ, ಬ್ಲಾಕ್ ಅಧ್ಯಕ್ಷರ ಜತೆ ಚರ್ಚೆ :

ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ಬಗ್ಗೆ ಕೇಳಿದಾಗ, “ಬ್ಲಾಕ್ ಮಟ್ಟದಲ್ಲಿ ಪಕ್ಷವನ್ನು ಪುನರ್ ರಚನೆ ಮಾಡಬೇಕಿದೆ. ಈಗಿರುವ ಅಧ್ಯಕ್ಷರುಗಳು ಬಹಳ ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕಿದೆ. ಕೆಲವರಿಗೆ ಬಡ್ತಿ ನೀಡಬೇಕು. ಮತ್ತೆ ಕೆಲವರಿಗೆ ಜವಾಬ್ದಾರಿ ನೀಡಬೇಕಿದೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗೆ ನ್ಯಾಯಾಲಯ ಯಾವಾಗ ಬೇಕಾದರೂ ಸೂಚನೆ ನೀಡಬಹುದು. ಅವುಗಳಿಗೆ ತಯಾರಿ ಮಾಡಿಕೊಳ್ಳಬೇಕು. ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ. ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿ, ಮಾರ್ಗದರ್ಶನ ನೀಡಲು ಇಂದು ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಧ್ಯಕ್ಷರ ಸಭೆ ಕರೆದಿದ್ದೇವೆ” ಎಂದು ತಿಳಿಸಿದರು.

ನಿಷ್ಕ್ರಿಯರಾಗಿರುವವರ ಬದಲಾವಣೆ ಖಚಿತ:

ಕಾರ್ಯೋನ್ಮುಖರಾಗದವರ ಬದಲಾವಣೆ ಮಾಡುವ ಬಗ್ಗೆ ಕೇಳಿದಾಗ, “ಯಾರು ಕಾರ್ಯೋನ್ಮುಖರಾಗಿಲ್ಲ ಅಂತಹವರನ್ನು ಖಂಡಿತವಾಗಿ ಬದಲಾಯಿಸಲಾಗುವುದು. ಇತ್ತೀಚೆಗೆ ನಡೆದ ಸಿಎಲ್ ಪಿ ಸಭೆಯಲ್ಲೂ ನಾನು ಈ ವಿಚಾರ ಹೇಳಿದ್ದೇನೆ. ಕಾಂಗ್ರೆಸ್ ಕಚೇರಿ ಕಡ್ಡಾಯವಾಗಿ ಇರಬೇಕು. ಶಾಸಕರ ಮನೆಯಲ್ಲಿ ಪಕ್ಷದ ಸಭೆ ಮಾಡುವಂತಿಲ್ಲ. ಮನೆಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿ. ಆದರೆ ಪಕ್ಷದ ಸಭೆಗಳು ಪಕ್ಷದ ಕಚೇರಿಯಲ್ಲೇ ಆಗಬೇಕು. ಇನ್ನು ಅಧಿವೇಶನದ ಬಳಿಕ ಇಬ್ಬರು ಮಂತ್ರಿಗಳು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ” ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News