ಬೈರತಿ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ: ರೇಣುಕಾಚಾರ್ಯ ಎಚ್ಚರಿಕೆ
ಬೆಂಗಳೂರು: ಸಚಿವ ಬೈರತಿ ಸುರೇಶ್ ಅವರು ಮಹಿಳೆಯರ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ್ದು, ಇದು ಖಂಡನೀಯ. ಸುರೇಶ್ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಸಿದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ಸಚಿವ ಸ್ಥಾನದಲ್ಲಿರುವ ಬೈರತಿ ಸುರೇಶ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ತಮ್ಮ ಮೇಲೆ ಅಪವಾದ ಬಂದ ತಕ್ಷಣ ಮಹಿಳೆಯರ ಗುಣನಡತೆ ಕುರಿತು ಆರೋಪ ಮಾಡುವುದು ಅವರಿಗೆ ಅಭ್ಯಾಸವಾಗಿದೆ. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವವರ ಗುಣನಡತೆ ಬಗ್ಗೆ ಮಾತನಾಡುವುದು ಅಕ್ಷಮ್ಯ. ಯಡಿಯೂರಪ್ಪರ ಪತ್ನಿ ಮೈತ್ರಾದೇವಿ ತಾಯಿ ಸಮಾನ. ಅವರು ಸಾವನ್ನಪ್ಪಿ ಹಲವಾರು ವರ್ಷಗಳು ಕಳೆದಿವೆ. ಈಗ ಅದರ ಕುರಿತು ಮಾತನಾಡುವುದು ಎಷ್ಟು ಸರಿ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ಮೈತ್ರಾದೇವಿ, ಶೋಭಾ ಕರಂದ್ಲಾಜೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದನ್ನು ಖಂಡಿಸುತ್ತೇನೆ. ಇದರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಬೇರೆಯವರ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಮಹಿಳೆಯರ ತೇಜೋವಧೆ ಮಾಡುವುದನ್ನು ನಿಲ್ಲಿಸಿ ಎಂದು ಅವರು ಆಗ್ರಹಿಸಿರುವ ರೇಣುಕಾಚಾರ್ಯ, ಮುಡಾ ಹಗರಣ ಮುಚ್ಚಿಕೊಳ್ಳುವ ಉದ್ದೇಶದಿಂದ ಬೈರತಿ ಸುರೇಶ್ ಈ ರೀತಿ ಹೇಳಿಕೆ ನೀಡಿ ವಿಷಯಾಂತರ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.