ಸಾಹಿತಿಗಳ ಕುರಿತಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡನೀಯ

Update: 2024-06-19 12:45 GMT

ಬೆಂಗಳೂರು : ಅಕಾಡೆಮಿಗಳ ನೇಮಕಾತಿ ಹಾಗೂ ಸಾಹಿತಿಗಳ ಕುರಿತಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಅತ್ಯಂತ ಖಂಡನೀಯವಾಗಿದ್ದು, ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಲೇಖಕಿ, ಸಾಹಿತಿಗಳು ಸೇರಿ ಪ್ರಗತಿಪರರು ಒತ್ತಾಯಿಸಿದ್ದಾರೆ.

ಬುಧವಾರ ಲೇಖಕಿ ಡಾ.ಎಚ್.ಎಸ್.ಅನುಪಮಾ, ನಿರಂಜನಾರಾಧ್ಯ ವಿ.ಪಿ, ಬಸವರಾಜ ಸೂಳಿಭಾವಿ, ಡಾ.ಶ್ರೀನಿವಾಸ ಕಕ್ಕಿಲಾಯ, ರಹಮತ್ ತರೀಕೆರೆ ಸೇರಿ 21 ಮಂದಿ ಪ್ರಕಟನೆ ಹೊರಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕಛೇರಿಗೆ ಸಾಹಿತಿಗಳನ್ನು ಕರೆದು ಸಭೆ ನಡೆಸಿದ್ದು ನಾನೇ, ಅದರಲ್ಲಿ ತಪ್ಪೇನು? ಅಕಾಡೆಮಿಯ ನೇಮಕಗಳೂ ನಿಗಮ ಮತ್ತು ಮಂಡಳಿಗಳ ನೇಮಕದಂತೆ ಪಕ್ಷದ ಹಿತಾಸಕ್ತಿಯ ನೇಮಕವೇ ಆಗಿದೆ. ಸಾಹಿತಿಗಳೂ ಪಕ್ಷ ರಾಜಕಾರಣಿಗಳೇ. ಬಾಯಿ ಬಿಟ್ಟು ಹೇಳಿಕೊಳ್ಳುವುದಿಲ್ಲ ಅಷ್ಟೇ. ಅಕಾಡೆಮಿಗಳ ಸ್ವಾಯತ್ತತೆ ಅಂತಾ ಏನೂ ಇಲ್ಲ. ಎಲ್ಲಾ ಸರಕಾರದ ನೇಮಕಾತಿಗಳೇ. ಹೀಗಾಗಿ ಎಲ್ಲಿ ಬೇಕಾದರೂ ಸಭೆ ಕರೆಯಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದು, ಈ ಹೇಳಿಕೆ ಅಕಾಡೆಮಿ ಮತ್ತು ಪ್ರಾಧಿಕಾರಗಳಂತ ಸ್ವಾಯತ್ತ ಸಂಸ್ಥೆಗಳ ಘನತೆಯನ್ನು ಕುಗ್ಗಿಸಿದೆ ಎಂದು ಸಾಹಿತಿಗಳು ವಿಷಾಧ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ಮುಖ್ಯಮಂತ್ರಿಗಳು ಮತ್ತು ಸರಕಾರದ ಇತರೆ ಸಚಿವರು ಅನುಮೋದಿಸುತ್ತಾರೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲೊರಟಿರುವ ಕೋಮುವಾದಿ ಹಾಗು ಸರ್ವಾಧಿಕಾರಿ ಧೋರಣೆಯ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ಎಲ್ಲ ಪ್ರಗತಿಪರ, ಪ್ರಜಾಸತ್ತಾತ್ಮಕ ಹಾಗು ಜಾತ್ಯತೀತ ಶಕ್ತಿಗಳನ್ನು ಜೊತೆಗೆ ಕೊಂಡೊಯ್ಯಬೇಕಾದ ಇಂದಿನ ರಾಜಕೀಯ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳ ಈ ಹೇಳಿಕೆ ನಮಗೆ ಅಘಾತವನ್ನುಂಟು ಮಾಡಿದೆ ಎಂದಿದ್ದಾರೆ.

ಅಕಾಡೆಮಿ ಮತ್ತು ಪ್ರಾಧಿಕಾರಗಳು ಉಳಿದ ಬೋರ್ಡ್ ಮತ್ತು ಪ್ರಾಧಿಕಾರಗಳಂತಲ್ಲ. ಸಾಹಿತ್ಯ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಈ ಅಕಾಡೆಮಿ ಹಾಗು ಪ್ರಾಧಿಕಾರಗಳು ವಿಷಯ ತಜ್ಞರ ತಜ್ಞತೆಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳು. ಇವುಗಳಿಗೆ ಸರಕಾರವೇ ಅಧ್ಯಕ್ಷರು ಹಾಗು ಸದಸ್ಯರನ್ನು ನೇಮಿಸಿದರೂ, ಅದು ತಜ್ಞತೆಯ ಮತ್ತು ಆ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಮಾನದಂಡವಾಗಿ ಇಟ್ಟುಕೊಂಡು ನೇಮಕವಾಗಿರುತ್ತದೆಯೇ ಹೊರತು ರಾಜಕೀಯ ಅಥವಾ ಪಕ್ಷ ರಾಜಕಾರಣ ಮಾನದಂಡವಲ್ಲ ಎಂದು ಸಾಹಿತಿಗಳು ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News